Begaluru Suburabn Rail: ಉಪನಗರ ರೈಲ್ವೆ ಯೋಜನೆಯ ಮಹತ್ವದ ಅಪ್ಡೇಟ್ ಕೊಟ್ಟ ವಿ.ಸೋಮಣ್ಣ
ಬೆಂಗಳೂರು, ಸೆಪ್ಟಂಬರ್ 09: ಬೆಂಗಳೂರು ಉಪನಗರ ರೈಲು ಯೋಜನೆಯು ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಮಾಣವಾಗುತ್ತಿದೆ. ಕೆಲವೊಂದು ಕಡೆ ಭೂಸ್ವಾಧೀನದ ಸಮಸ್ಯೆ ಇದ್ದು, ಮೂರು ತಿಂಗಳ ಒಳಗೆ ಭೂಮಿ ಹಸ್ತಾಂತರಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಯಾವ ಸಬೂಬು ಹೇಳದೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹಾಗೂ ವಿ.ಸೋಮಣ್ಣ ಅವರು ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಕೆ-ರೈಡ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ವಿ.ಸೋಮಣ್ಣ ಅವರು, ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (ಕಾರಿಡಾರ್-2, 25 ಕಿ.ಮೀ) ಮತ್ತು ಹೀಲಲಗಿ- ರಾಜಾನುಕುಂಟೆ (ಕಾರಿಡಾರ್4, 46.88 ಕಿ.ಮೀ) ಉಪನಗರ ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ, ನಾಡಿಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಬಾಕಿ ಕಾರಿಡಾರ್ ನಿರ್ಮಾಣ ನಿರ್ಧಾರ ಶೀಘ್ರ
ಬೆಂಗಳೂರು ಉಪನಗರ ರೈಲ್ವೆ ಯೋಜನೆಯು ಒಟ್ಟು ನಾಲ್ಕು ಕಾರಿಡಾರ್ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಕಾಮಗಾರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನಿಗದಿತ ಅವಧಿಯೊಳಗೇ ಈ ಎರಡೂ ಕಾರಿಡಾರ್ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಬಾಕಿ ಕಾರಿಡಾರ್ ನಿರ್ಮಾಣ ಬಗ್ಗೆಯೂ ತಿರ್ಮಾನಿಸಲಾಗುವುದು.
ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆವೊಡ್ಡಿಕೊಳ್ಳುವುದರ ಬದಲು, ಎಲ್ಲಿ ಯಾರ ಸೇವೆ ಇಲ್ಲವೊ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಲಿ.

ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೂ ಸೇರಿಸಿಕೊಂಡು ಸಮನ್ವಯದ ಸಭೆಗಳನ್ನು ನಡೆಸಬೇಕು. ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ಅನಗತ್ಯ ವಿಳಂಬವನ್ನು ತಡೆಯಬಹುದು ಎಂದು ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ರೈಲ್ವೆ ಬೋಗಿಗಳ ಸಮಸ್ಯೆಗೆ ಪರಿಹಾರವೇನು?
ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಬೋಗಿಗಳನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೆ-ರೈಡ್ ಟೆಂಡರ್ ಕರೆದಿದ್ದು, ಯಾವ ಸಂಸ್ಥೆಯೂ ಇದರಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ರೈಲ್ವೆಯ ನೆರವು ನೀಡಬೇಕೆನ್ನುವ ಸಚಿವ ಎಂ.ಬಿ.ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಆದಷ್ಟು ಬೇಗ ದೆಹಲಿಯಲ್ಲಿ ಸಭೆ ಆಯೋಜಿಸಿ, ಈ ಬಗ್ಗೆ ಪರಿಹಾರ ಸೂಚಿಸುವುದಾಗಿ ಅವರು ಭರವಸೆ ನೀಡಿದರು.
2026ರ ಅಂತ್ಯದಲ್ಲಿ ಎರಡೂ ಕಾರಿಡಾರ್ ಕಾಮಗಾರಿ ಮುಗಿಯಲು ಯೋಜನೆ ರೂಪಿಸಲಾಗಿದೆ. ಅದಕ್ಕಿಂತ ಕನಿಷ್ಠ ಆರು ತಿಂಗಳು ಮೊದಲು ರೈಲ್ವೆ ಬೋಗಿಗಳ ಸರಬರಾಜು ಆಗಬೇಕು. ಇಲ್ಲದಿದ್ದರೆ ಆ ವೇಳೆಗೆ ರೈಲ್ವೆ ಸಂಚಾರ ಆರಂಭಿಸಲು ಕಷ್ಟ ಆಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರ ಗಂಭೀರತೆಯನ್ನು ಗಮನಿಸಿ, ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಉಪನಗರ ರೈಲ್ವೆ ಯೋಜನೆ ವಿಸ್ತರಣೆ
ಬೆಂಗಳೂರಿನ ನೆರೆಹೊರೆಯ ನಗರ/ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಉಪನಗರ ರೈಲ್ವೆ ಯೋಜನೆಯ ವಿಸ್ತರಣೆ ಅಗತ್ಯ ಇದೆ. ಬೆಂಗಳೂರಿನಿಂದ ಸಮೀಪದ ತುಮಕೂರು, ಮೈಸೂರು, ಮಾಗಡಿ, ಗೌರೀಬಿದನೂರು, ಕೋಲಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು.
ಬೆಂಗಳೂರು- ಯುಲಂಹಕ- ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್-1 ಉಪನಗರ ರೈಲ್ವೆ ಯೋಜನೆಯನ್ನು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಪರ್ಕಿಸುವ ಬದಲು ದೇವನಹಳ್ಳಿಯಿಂದಲೇ ನೇರವಾಗಿ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯತೆ ಬಗ್ಗೆ ಚಿಂತಿಸಲಾಗುವುದು ಎಂದರು.
ಬೆಂಗಳೂರು ಹೊರ ವರ್ತುಲ ರೈಲ್ವೆಗೆ ಸಂಪರ್ಕ
ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ವರ್ತುಲ ರೈಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು. ಇದೊಂದು ಒಳ್ಳೆಯ ಪರಿಕಲ್ಪನೆ ಆಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.
ಸುಮಾರು 21,000 ಕೋಟಿ ವೆಚ್ಚದ 281 ಕಿ.ಮೀ ವರ್ತುಲ ರೈಲ್ವೆ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನೂ ಇದರ ಜತೆ ಸಂಪರ್ಕ ಮಾಡುವುದು ಹೆಚ್ಚು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಕೆ-ರೈಡ್ ಸಂಸ್ಥೆ ಮುಖ್ಯಸ್ಥರು, ಬಿಬಿಎಂಪಿ ಹಾಗೂ ಇಲಾಖೆ ಅಧಿಕಾರಿಗಳೂ ಉಪಸ್ಥಿತರಿದ್ದರು.












Click it and Unblock the Notifications