ಬೆಂಗಳೂರಿನಲ್ಲಿ ಭಾರತದ ಮೊದಲ 3ಡಿ ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು, ಆಗಸ್ಟ್ 18: ಭಾರತದ ಮೊದಲ 3 ಡಿ ಅಂಚೆ ಕಚೇರಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ಉದ್ಟಾಟನೆ ಮಾಡಿದ್ದಾರೆ.
ಕಳೆದ ಮಾರ್ಚ್ 21ರಂದು ಅಂಚೆ ಕಚೇರಿ ನಿರ್ಮಾಣ ಕೆಲಸ ಶುರುವಾಗಿತ್ತು. ಕೇವಲ 44 ದಿನಗಳಲ್ಲಿ ಈ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ. ವಿಶಿಷ್ಠವಾಗಿ ರಚನೆಯಾಗಿರುವ ಅಂಚೆಕಚೇರಿಯನ್ನು ವೀಕ್ಷಿಸಲಿದ್ದಾರೆ, 'ಕೇಂಬ್ರಿಡ್ಜ್ ಲೇಔಟ್ ಅಂಚೆ ಕಚೇರಿ' ಎಂದು ಹೆಸರಿಸಲಾಗಿದೆ.

ಕಟ್ಟಡದ ರಚನೆಯು ಮೇ 3 ರೊಳಗೆ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಜಾಲವನ್ನು ನಿರ್ಮಿಸಲು ಎರಡು ತಿಂಗಳು ಸಮಯ ತೆಗೆದುಕೊಂಡಿತು. ಕಟ್ಟಡ ಉದ್ಘಾಟನೆಗೆ ಸಚಿವರ ಲಭ್ಯತೆಗೆ ಇನ್ನೂ ಒಂದು ತಿಂಗಳು ಕಾಯಲಾಗಿದೆ. ಹೊಸ ಅಂಚೆ ಕಚೇರಿ ಉದ್ಘಾಟನೆಯಾದ ಬಳಿಕ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು ಮತ್ತು ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಎಲ್ & ಟಿ ಈ ಕಟ್ಟಡವು ನಿರ್ಮಾಣ ಮಾಡಿದೆ. 1,100 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ತಲೆ ಎತ್ತಿದೆ. 3ಡಿ ಕಾಂಕ್ರೀಟ್ ಮುದ್ರಣಕ್ಕಾಗಿ ತೆರಿಗೆ ಸೇರಿ ಸುಮಾರು 26 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಪವರ್, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳನ್ನು ಅಂಚೆ ಇಲಾಖೆಯ ಸಿವಿಲ್ ವಿಂಗ್ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದೆ.
The spirit of Aatmanirbhar Bharat!
— Ashwini Vaishnaw (@AshwiniVaishnaw) August 18, 2023
🇮🇳India’s first 3D printed Post Office.
📍Cambridge Layout, Bengaluru pic.twitter.com/57FQFQZZ1b
ವಿನ್ಯಾಸದ ಪ್ರಕಾರ ಕಟ್ಟಡವನ್ನು ಸೈಟ್‌ನಲ್ಲಿ ಮುದ್ರಿಸಲಾಗಿದೆ. "ಇದು ಬಹುಶಃ ಈ ಪ್ರಕ್ರಿಯೆಯಿಂದ ನಿರ್ಮಿಸಲಾದ ಮೊದಲ ಸಾರ್ವಜನಿಕ ಕಟ್ಟಡವಾಗಿದೆ. ಇತರ 3ಡಿ-ಮುದ್ರಿತ ಕಟ್ಟಡಗಳನ್ನು ಬೇರೆಡೆ ಮುದ್ರಣ ಮಾಡಿ ನಂತರ ಸೈಟ್‌ಗಳಲ್ಲಿ ತಂದು ಜೋಡಿಸಲಾಗುತ್ತದೆ. ಆದರೆ ಇದನ್ನು ಸೈಟ್‌ನಲ್ಲೇ ಮುದ್ರಣ ಮಾಡಲಾಗಿದೆ.
ದೇಶದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬೆಂಗಳೂರು, ಈಗ 3-ಡಿ ಕಟ್ಟಡ ಅಂಚೆ ಕಚೇರಿ ಹೊಂದಿದ ನಗರಗಳಲ್ಲಿ ಮೊದಲನೆಯದಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಟ್ಟಿದ ಕಟ್ಟಡ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದರೆ ನೀವೂ ಒಮ್ಮೆ ಭೇಟಿ ನೀಡಬಹುದು.

ನಾವು ಕಡಿಮೆ ವೆಚ್ಚದ ಅಂಚೆ ಕಚೇರಿಗಳನ್ನು ನಿರ್ಮಿಸಲು ಉತ್ಸುಕರಾಗಿದ್ದೇವೆ. ಆದ್ದರಿಂದ, ನಮ್ಮ ಹಲಸೂರು ಬಜಾರ್ ಉಪ-ಅಂಚೆ ಕಚೇರಿಯನ್ನು ನಿರ್ಮಿಸಲು ನಾವು ಲಾರ್ಸನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್ (ಎಲ್ & ಟಿ) ಅನ್ನು ಸಂಪರ್ಕಿಸಿದ್ದೇವೆ. ಭಾರತದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ನಿರ್ಮಾಣವನ್ನು ಕೈಗೊಳ್ಳುತ್ತಿರುವ ಏಕೈಕ ಕಂಪನಿ ಎಂದು ಹೇಳಲಾಗುತ್ತದೆ ಎಂದು ಈ ಹಿಂದೆ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಹೇಳಿದ್ದರು.
ಭಾರತದ ಮೊದಲ 3D ಮುದ್ರಿತ ಅಂಚೆ ಕಛೇರಿ-ಕೇಂಬ್ರಿಡ್ಜ್ ಲೇಔಟ್ ಅನ್ನು ಇಂದು ಬೆಂಗಳೂರಿನಲ್ಲಿ ಶ್ರೀ ಅಶ್ವಿನಿ ವೈಷ್ಣವ್ ಅವರು ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಗೋಐ ಸಚಿವರು ಉದ್ಘಾಟಿಸಿದರು ಎಂದು ಕರ್ನಾಟಕ ಅಂಚೆ ವೃತ್ತದ ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿದೆ.
ಭಾರತದಲ್ಲಿ 3ಡಿ ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳ ನಿರ್ಮಾಣ ಆಗಿದ್ದಿವೆ. 2020ರಲ್ಲಿ ಎಲ್ ಅಂಡ್ ಟಿ ಮೊದಲ ಬಾರಿಗೆ ಈ ತಂತ್ರಜ್ಞಾನದಲ್ಲಿ ಕಟ್ಟಡ ಕಟ್ಟಿತ್ತು. ಆದರೆ, ಸಾರ್ವಜನಿಕ ಕಟ್ಟಡವೊಂದನ್ನು 3ಡಿ ಪ್ರಿಂಟಿಂಗ್ನಲ್ಲಿ ತಯಾರಿಸಿದ್ದು ಇದೇ ಮೊದಲು. ಅಂತೆಯೇ, ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಭಾರತದ ಮೊದಲ ಥ್ರೀಡಿ ಮುದ್ರಿತ ಸರ್ಕಾರಿ ಕಟ್ಟಡವೆಂಬ ದಾಖಲೆಗೆ ಬಾಜನವಾಗಿದೆ.
ಇದರ ಎಲ್ಲಾ ನಿರ್ಮಾಣ ಕಾರ್ಯವೂ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಎಂಥ ಸಂಕೀರ್ಣ ವಿನ್ಯಾಸದಲ್ಲೂ ಕಟ್ಟಡ ನಿರ್ಮಿಸಲು ಇದರಿಂದ ಸಾಧ್ಯ. ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3ಡಿ ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ.
ಕೈಯಿಂದ ನಿರ್ಮಿಸಲು ಕಷ್ಟವಾದ ಆಕಾರವನ್ನು 3ಡಿ ಪ್ರಿಂಟಿಂಗ್ ಮೂಲಕ ಸುಲಭವಾಗಿ ಮಾಡಬಹುದು. ಬೇರೆ ಬೇರೆ ದೇಶಗಳಲ್ಲಿ ಹಲವೆಡೆ ಈ ರೀತಿ ತ್ರೀಡಿ ಮುದ್ರಿತ ಹಲವು ಕಟ್ಟಡಗಳ ನಿರ್ಮಾಣವಾಗಿದೆ. ಮಂಗಳ ಇತ್ಯಾದಿ ಅನ್ಯ ಗ್ರಹಗಳನ್ನು ಮನುಷ್ಯ ವಸಾಹತು ಸ್ಥಾಪಿಸುವುದಾದರೆ ಅಲ್ಲಿ ವಾಸಸ್ಥಳ ನಿರ್ಮಾಣಕ್ಕೆ 3ಡಿ ಪ್ರಿಂಟೆಡ್ ಟೆಕ್ನಾಲಜಿ ಬಳಕೆ ಮಾಡುವ ಆಲೋಚನೆ ಇದೆ.












Click it and Unblock the Notifications