ಬ್ರಿಟನ್‌ನಿಂದ ಬೆಂಗಳೂರಿಗೆ ಮರಳಿದ ತಾಯಿ-ಮಗುವಿಗೆ ಕೊರೊನಾ ಸೋಂಕು
ಬೆಂಗಳೂರು, ಡಿಸೆಂಬರ್ 22: ಬ್ರಿಟನ್ ನಲ್ಲಿ ಹೊಸ ರೂಪಾಂತರದ ಕೊರೊನಾ ಸೋಂಕು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ರಿಟನ್-ಭಾರತ ವಿಮಾನ ಸೇವೆಯನ್ನು ಡಿ.31ರವರೆಗೂ ರದ್ದುಗೊಳಿಸಲಾಗಿದೆ.
Recommended Video
ಮಂಗಳವಾರ ಬೆಳಿಗ್ಗೆ ಬ್ರಿಟನ್ ನಿಂದ ಬಂದ ಪ್ರಯಾಣಿಕರನ್ನು ಪರೀಕ್ಷಿಸಲಾಗಿದ್ದು, ಚೆನ್ನೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಲ್ಲಿ ಒಟ್ಟು ಆರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲೂ ಬ್ರಿಟನ್ ನಿಂದ ಮರಳಿದವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕರ್ನಾಟಕಕ್ಕೆ ಕಳೆದ ಹದಿನೈದು ದಿನಗಳಿಂದ ಬ್ರಿಟನ್ ನಿಂದ ಬಂದವರ ಪಟ್ಟಿಯನ್ನು ನೀಡಲು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸೂಚಿಸಿದೆ.
ಬ್ರಿಟಿಷ್ ಏರ್ ವೇಸ್ ನಿಂದ ಬಂದ 291 ಮಂದಿಯಲ್ಲಿ 49 ಮಂದಿ ಕೊರೊನಾ ಸರ್ಟಿಫಿಕೇಟ್ ಪಡೆದುಕೊಂಡಿಲ್ಲ ಹಾಗೂ ಯಾವುದೇ ಪರೀಕ್ಷೆಗೆ ಒಳಗಾಗಿಲ್ಲ. ಏರ್ ಇಂಡಿಯಾ ವಿಮಾನದಲ್ಲಿ ಬಂದ 246 ಮಂದಿಯಲ್ಲಿ 89 ಮಂದಿ ಕೊರೊನಾ ಸರ್ಟಿಫಿಕೇಟ್ ಇಲ್ಲದೇ ಬಂದಿದ್ದು, ಪರೀಕ್ಷೆಯನ್ನೂ ನಡೆಸಿಲ್ಲ ಎಂದು ವೈದ್ಯಕೀಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದು, ಒಟ್ಟು 138 ಮಂದಿಯನ್ನು ಪತ್ತೆ ಹಚ್ಚುವ ಕೆಲಸವನ್ನು ಕೈಗೊಳ್ಳಲಾಗಿತ್ತು.

ಇದೀಗ, ಬ್ರಿಟನ್ ನಿಂದ ಮರಳಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆರು ವರ್ಷದ ಹೆಣ್ಣು ಮಗು ಹಾಗೂ 35 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಈ ತಾಯಿ-ಮಗು ಬ್ರಿಟನ್‌ನಿಂದ ಬೆಂಗಳೂರಿಗೆ ಡಿ.19ರಂದು ಬಂದಿದ್ದರು ಎನ್ನಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 38 ಜನರು ಬೆಂಗಳೂರಿಗೆ ಬಂದಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರಲ್ಲಿ ಕೊರೊನಾ ವೈರಸ್ ಇರುವುದು ತಿಳಿದುಬಂದಿದೆ. ಇಬ್ಬರ ಗಂಟಲು ದ್ರವದ ಮಾದರಿಯನ್ನು ನಿಮ್ಹಾನ್ಸ್ ನಿಂದ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನೆ ಮಾಡಲಾಗಿದೆ.
ಇಬ್ಬರಲ್ಲಿ ಕಾಣಿಸಿಕೊಂಡಿರುವ ಈ ಸೋಂಕು ರೂಪಾಂತರಿ ವೈರಸ್ ಇರಬಹುದೇ ಎಂಬ ಪರೀಕ್ಷೆ ನಡೆಯಬೇಕಿದೆ.












Click it and Unblock the Notifications