ಕೊರೊನಾ ನಾಲ್ಕನೇ ಅಲೆಯ ಭೀತಿ ನಡುವೆಯೇ ಒಮಿಕ್ರಾನ್ ಹೊಸ ರೂಪಾಂತರ ಪತ್ತೆ
ಬೆಂಗಳೂರು, ಏಪ್ರಿಲ್ 22 : ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಒಮಿಕ್ರಾನ್ ಉಪ- ರೂಪಾಂತರ B.A.2ಗೆ ಸಂಬಂಧಿಸಿದ B,A2.10 ಮತ್ತು B.A2.12 ಎಂಬ ಎರಡು ಹೊಸ ಕೋವಿಡ್ 19 ರೂಪಾಂತರಗಳು ಪತ್ತೆಯಾಗಿದೆ.
GISAID ದತ್ತಾಂಶದ ಪ್ರಕಾರ ಬೆಂಗಳೂರಿನಲ್ಲಿ ಸಂಗ್ರಹಿಸಿದ ಕೆಲವು ಮಾದರಿಗಳಲ್ಲಿ B,A2.10 ಮತ್ತು B.A2.12 ರೂಪಾಂತರಗಳನ್ನು ಪತ್ತೆ ಮಾಡಲಾಗಿದೆ. ಸದ್ಯಕ್ಕೆ ಈ ಉಪ ರೂಪಾಂತರ ತಳಿಯ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಮಾದರಿಗಳು ಅಗತ್ಯವಿದೆ. ಸದ್ಯಕ್ಕೆ ಈ ರೂಪಾಂತರವು B.1.1.529.2.10ರ ಉಪ ತಳಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಒಮಿಕ್ರಾನ್ ಉಪ ತಳಿಯ ಹೊಸ ರೂಪಾಂತರ ಪತ್ತೆಯಾಗಿರುವ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ಕೆ.ವಿ ತ್ರಿಲೋಕ್ ಚಂದ್ರ ಪ್ರತಿಕ್ರಿಯೆ ನೀಡಿದ್ದು, "ಹೊಸ ರೂಪಾಂತರಗಳ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದಿಲ್ಲ. ಆದರೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆ ಅಧಿಕಾರಿಗಳು ಸೋಂಕು ಹರಡದಂತೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ನಗರದ 198 ವಾರ್ಡ್‌ಗಳಲ್ಲಿ ಯಾವುದೇ ಹೊಸ ರೂಪಾಂತರ ಹರಡದಂತೆ ಕಣ್ಗಾವಲು ಇರಿಸಲಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟು ನಗರದಲ್ಲಿ 1,428 ಸಕ್ರಿಯ ಪ್ರಕರಣಗಳಿವೆ. ಸದ್ಯಕ್ಕೆ ಸೋಂಕು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ," ಎಂದು ತಿಳಿಸಿದ್ದಾರೆ.

ಕೊರೊನಾ ನಾಲ್ಕನೇ ಅಲೆ ಭೀತಿ ಇರುವ ಹಿನ್ನಲೆ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿರುವುದನ್ನ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಹೆಚ್ಚಿನ ಕೊರೊನಾ ಪರೀಕ್ಷೆಯನ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ .ಡಿ ಪ್ರಕಟಣೆ ಹೊರಡಿಸಿದ್ದಾರೆ.
"ನಾವು ಕೊರೊನಾ ಹರಡದಂತೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ ಪರೀಕ್ಷೆಗಳನ್ನು ಸಹ ಹೆಚ್ಚಿಸಿದ್ದೇವೆ. ಸದ್ಯಕ್ಕೆ ಕರ್ನಾಟಕವು ಶೇಕಡ 1 ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ದರವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗಿ 1% ಗೆ ಪಾಸಿಟಿವಿಟಿ ದರ ತಲುಪಬಹುದು. ಹೀಗಾಗಿ ಈಗಿನಿಂದಲೇ ಮುಜಾಗೃತ ಕ್ರಮ ಕೈಗೊಂಡಿದ್ದೇವೆ," ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ನಡುವೆಯೇ ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಮಿಕ್ರಾನ್ ಹೊಸ ತಳಿಯ ರೂಪಾಂತರಗಳು ಪತ್ತೆಯಾಗಿರುವುದು ಜನರ ನಿದ್ದೆಗೆಡಿಸಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೊನಾ ಕೇಸ್‌ಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಈಗ ಒಮಿಕ್ರಾನ್ ರೂಪಾಂತರದ ಭೀತಿಯು ಸಹ ಜನರಲ್ಲಿ ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಸರ್ಕಾರ ಕೂಡ ಕೊರೊನಾ ಹೆಚ್ಚು ಹರಡದಂತೆ ಕಠಿಣ ಕಾನೂನು ಕ್ರಮಗಳನ್ನ ತರಬೇಕಾಗಿದೆ.












Click it and Unblock the Notifications