ಜೂನ್ 3ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಕಂಪ್ಲೀಟ್ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜೂನ್ 3ರ ಬುಧವಾರದಂದು ನೂತನ ಮುಖ್ಯಮಂತ್ರಿ ಡಿಕೆ ಶೀವಕುಮಾರ್ ಅವರ ಪ್ರಮಾಣ ವಚನ ಸಮಾರಂಭ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೃದಯಭಾಗದಲ್ಲಿ ಕಟ್ಟುನಿಟ್ಟಿನ ಭದ್ರತೆ ಹಾಗೂ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಸಂಜೆ 4 ಗಂಟೆಗೆ ಈ ಮಹತ್ವದ ಕಾರ್ಯಕ್ರಮ ಜರುಗಲಿದ್ದು, ದೇಶದ ವಿವಿಧ ಮೂಲೆಗಳಿಂದ ಗಣ್ಯಾತಿಗಣ್ಯರು, ರಾಜಕೀಯ ಮುಖಂಡರು ಮತ್ತು ವಿವಿಐಪಿಗಳು ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರಿ ಪೊಲೀಸರು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಪ್ರದೇಶದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ.

ಮುಖ್ಯವಾಗಿ ಲೋಕಭವನ, ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ.
ಸಮಾರಂಭದ ವೇದಿಕೆಗೆ ಕೇವಲ ಆಮಂತ್ರಿತ ಅತಿಥಿಗಳಿಗೆ ಮಾತ್ರ ಪ್ರವೇಶವಿರಲಿದ್ದು, ಕಬ್ಬನ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಅಂಬೇಡ್ಕರ್ ರಸ್ತೆಯ ಪ್ರಮುಖ ಭಾಗಗಳನ್ನು ಸಾಮಾನ್ಯ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಇದರಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೆಬ್ಬಾಳ, ಶಿವಾಜಿನಗರ ಮತ್ತು ನಗರದ ಇತರ ಭಾಗಗಳಿಗೆ ಪ್ರಯಾಣಿಸುವ ಸವಾರರು ಕನ್ನಿಂಗ್‌ಹ್ಯಾಮ್ ರಸ್ತೆ, ವಸಂತನಗರ, ನೃಪತುಂಗ ರಸ್ತೆ ಹಾಗೂ ಹೊರವರ್ತುಲ ರಸ್ತೆಯಂತಹ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ಕೋರಲಾಗಿದೆ.
ಇದಲ್ಲದೆ, ಸಿಬಿಡಿ ವ್ಯಾಪ್ತಿಯ ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಸ್ತೂರಬಾ ರಸ್ತೆ, ಮಿಲ್ಲರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕೆ.ಜಿ ರಸ್ತೆ, ನೃಪತುಂಗ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪಾಸ್ ಹೊಂದಿರುವವರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಧಾನಸೌಧ, ನೆಹರು ತಾರಾಲಯ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ, ಸರ್ಕಾರಿ ಕಲಾ ಕಾಲೇಜು, ಶಿವಾಜಿನಗರ ಮಲ್ಟಿ-ಲೆವೆಲ್ ಪಾರ್ಕಿಂಗ್ ಮತ್ತು ಅರಮನೆ ಮೈದಾನಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ, ವಿವಿಐಪಿಗಳ ಬೆಂಗಾವಲು ವಾಹನಗಳ ಸುಗಮ ಚಲನೆಗಾಗಿ ಮತ್ತು ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
1. ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಒ. ವೃತ್ತದಿಂದ ಲೋಕಭವನದವರೆಗೆ ಸಂಚರಿಸುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಹಾಗೂ ಅನಿಲ್ ಕುಂಬ್ಳೆ, ಜಂಕ್ಷನ್ ಕಡೆಗೆ ಎಡತಿರುವು ಪಡೆದು ಸಂಚರಿಸಬಹುದಾಗಿದೆ.
2. ಕ್ರೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
3. ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
4. ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಎಡ ತಿರುವು ಪಡೆದು ಸಂಚರಿಸಬಹುದಾಗಿದೆ.
5. ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಸಂಚರಿಸುವ ವಾಹನಗಳು ಅನಿಲ್‌ಕುಂಬ್ಳೆ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಸಂಚರಿಸಬಹುದಾಗಿದೆ.
6. ಹಲಸೂರು ಮತ್ತು ಹಳೆ ಏರ್‌ಪೊರ್ಟ್ ಕಡೆಯಿಂದ ಕೆಂಪೇಗೌಡ ಏರ್‌ಪೋರ್ಟ್ ಮತ್ತು ಬಸವೇಶ್ವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳ ಸವಾರರು ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿನಗರ ಬಸ್‌ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು.
7. ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಹೆಬ್ಬಾಳ ಕಡೆಗೆ ಸಂಚರಿಸುವ ವಾಹನಗಳ ಸವಾರರು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯಿಂದ ರಿಂಗ್ ರಸ್ತೆಯ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸುವುದು.
8. ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆ ಕಡೆಯಿಂದ ಬರುವಂತಹ ವಾಹನಗಳು ಬಿ.ಆರ್.ವಿ ಜಂಕ್ಷನ್ ಶಿವಾಜಿನಗರ ಬಸ್ ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2026
ಯಾವುದೇ ಅನಾವಶ್ಯಕ ಗೊಂದಲ ಹಾಗೂ ತೊಂದರೆಗಳನ್ನು ತಪ್ಪಿಸಲು ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು, ಸಾಧ್ಯವಾದಷ್ಟು ಸಿಬಿಡಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕೆಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications