ಬೆಂಗಳೂರಲ್ಲಿ Traffic Park ಆರಂಭ; ಏನಿದು, ತಿಳಿಯಿರಿ
ಬೆಂಗಳೂರು, ಫೆಬ್ರವರಿ 05: ರಸ್ತೆ ಸುರಕ್ಷತೆ ವಿಚಾರದಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವುದು ಅತಿ ಮುಖ್ಯ. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಸಂಚಾರಿ ನಿಯಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಶಾಲಾ ಮಕ್ಕಳಿಗೆ Traffic park ವೀಕ್ಷಣೆ ಮೂಲಕ ಸಾರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದೆ. ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.

ಈ ಕುರಿತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಬೆಂಗಳೂರು ನಗರ ಇವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.
ಸುತ್ತೋಲೆಯ ವಿವರ; ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಸ್ತೆ ಅಪಘಾತಗಳು ನಡೆಯದಂತೆ ತಡೆಯುವ ಪ್ರಯತ್ನವನ್ನು ಸಂಚಾರ ವಿಭಾಗವು ಮಾಡುತ್ತಿದ್ದು, ವಿವಿಧ ಶಾಲೆಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿ ಸಿಬ್ಬಂದಿಯವರು Student Association for Road Safety ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳುವುದರ ಜೊತೆಗೆ Safe Root to School ಯೋಜನೆಯಡಿಯಲ್ಲಿ ಶಾಲೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಅಭ್ಯಾಸ ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಈ ನಿಟ್ಟಿನಲ್ಲಿ Traffic Police Park ಅನ್ನು ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, 'ಮೊಳಕೆಯಲ್ಲಿಯೇ ತಿದ್ದಿರಿ' ಎಂಬುದು ಈ ಪಾರ್ಕ್‌ನ ಧ್ಯೇಯ ವಾಕ್ಯವಾಗಿದೆ. ನೂರಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಪಾದಚಾರಿ ಮಾರ್ಗದ ಬಗ್ಗೆ ತಿಳುವಳಿಕೆ, ರಸ್ತೆ ಅಪಘಾತವನ್ನು ತಪ್ಪಿಸಿ ಜೀವವನ್ನು ಉಳಿಸುವ ಸಂಚಾರಿ ನಿಯಮಗಳ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವುದು, Traffic Park ನ ಪ್ರಮುಖ ಉದ್ದೇಶವಾಗಿದೆ ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.
Traffic Park ರಸ್ತೆ ಸುರಕ್ಷತೆ ನಿಯಮ ಮತ್ತು ಫಲಕಗಳನ್ನು ಒಳಗೊಂಡಿದ್ದು, Zebra Crossing, road marking, signal, camera, zero tolerance zone ಒಳಗೊಂಡಂತೆ ಅನೇಕ ವಿಚಾರಗಳನ್ನು ಮಕ್ಕಳು ಇಲ್ಲಿ ತಿಳಿಯಬಹುದಾಗಿದೆ. ಮಕ್ಕಳಿಗೆ ಹೆಚ್ಚಿನ ಮಾಹಿತಿ ಒದಗಿಸುವ ದೃಷ್ಠಿಯಿಂದ ಗ್ರಂಥಾಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದು ಅತ್ಯಂತ ಅನುಕೂಲಕರ ಸ್ಥಳವಾಗಿದ್ದು, ಶಾಲಾ ವಿದ್ಯಾರ್ಥಿಗಳನ್ನು ನಿರಂತರವಾಗಿ ಇಲ್ಲಿಗೆ ಕರೆ ತಂದು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಅರಿವು ನೀಡಲಾಗುತ್ತಿದೆ.
ಸುರಕ್ಷಿತ ಚಾಲನೆ ಎಲ್ಲದ್ದಕ್ಕೂ ಸಾಧನಾ ಎಂಬ ಶೀರ್ಷಿಕೆಯಡಿ ರಸ್ತೆ ಸುರಕ್ಷತೆ ಪ್ರಾಣ ರಕ್ಷೆ ಎಂಬ ಅಂಶದೊಂದಿಗೆ ಸುರಕ್ಷಿತವಾದ ಹಾಗೂ ಸುರಕ್ಷಿತವಲ್ಲದ ಸಾರಿಗೆ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆಯನ್ನು ನೀಡುತ್ತದೆ. ಅದರಲ್ಲಿ ಮುಖ್ಯವಾಗಿ Mandatory/compulsory sign board, confectionery information sign board ಗಳು ಅನೇಕ ವಿಚಾರಗಳ ಬಗ್ಗೆ ಮಕ್ಕಳಿಗೆ ಅರಿವು ನೀಡಲಾಗುತ್ತಿದೆ.
ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳುವಳಿಕೆ ನೀಡಲುTraffic Park ಒಂದು ಸೂಕ್ತ ತಾಣವಾಗಿದೆ. ಶಾಲಾ ಹಂತದಲ್ಲಿ ಕೈಗೊಳ್ಳುವ ಕ್ಷೇತ್ರ ಭೇಟಿ ಇಲ್ಲವೆ ಶೈಕ್ಷಣಿಕ ಪ್ರವಾಸಗಳ ಸಂದರ್ಭಗಳಲ್ಲಿ ಈ ಸ್ಥಳದ ವೀಕ್ಷಣೆ ಕೈಗೊಂಡು, ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಕ್ರಮವಹಿಸಲು ತಿಳಿಸಲಾಗಿದೆ. 4 ರಿಂದ 10 ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಡ್ಡಾಯ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲೂ ಸಹ ತಿಳಿಸಲಾಗಿದೆ.
ಈ Traffic Park ಸೇಂಟ್ ಮಾರ್ಕ್ಸ್ ರಸ್ತೆ, ಹೋಟೆಲ್ ಏರ್ಲೈನ್ ಎದುರು, ಬೌರಿಂಗ್ ಇನ್ಸ್ ಟಿಟ್ಯೂಟ್ ಹತ್ತಿರ, ಅನಿಲ್ ಕುಂಬ್ಳೆ ವೃತ್ತ ಬೆಂಗಳೂರು ಇಲ್ಲಿ ಇದೆ. ಸದರಿ ಪಾರ್ಕ್ ವೀಕ್ಷಣೆಗೆ ಕರೆ ಮಾಡಲು ದೂರವಾಣಿ ಸಂಖ್ಯೆ 9008893104 / 8088012405.












Click it and Unblock the Notifications