ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ನಗರಗಳಲ್ಲಿ ಬೆಂಗಳೂರು ಒಂದು
ಬೆಂಗಳೂರು, ಡಿ. 30: 2021 ರಲ್ಲಿ ರಸ್ತೆ ಅಪಘಾತಗಳಿಂದಾಗಿ ಅತಿ ಹೆಚ್ಚು ಸಾವು ಸಂಭವಿಸಿದ ನಗರಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (Ministry of Road Transport and Highways) ಅಂಕಿಅಂಶಗಳು ತಿಳಿಸಿವೆ.
ಈ ಪಟ್ಟಿಯಲ್ಲಿ ದೆಹಲಿಯು 1,239 ಸಾವುಗಳನ್ನು ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದೆ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ 998 ಮತ್ತು 654 ಸಾವುಗಳು ವರದಿಯಾಗಿದ್ದು, ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಬೆಂಗಳೂರಿನ ನಂತರ ಮೊದಲ 10 ಸ್ಥಾನದಲ್ಲಿರುವ ಇತರ ನಗರಗಳೆಂದರೆ ಜೈಪುರ, ಕಾನ್ಪುರ, ಆಗ್ರಾ, ಅಲಹಾಬಾದ್ (ಈಗ ಪ್ರಯಾಗ್‌ರಾಜ್), ಇಂದೋರ್, ರಾಯ್‌ಪುರ ಮತ್ತು ಜಬಲ್‌ಪುರ.

'ಭಾರತದಲ್ಲಿ ರಸ್ತೆ ಅಪಘಾತಗಳು - 2021' ಎಂಬ ಶೀರ್ಷಿಕೆಯಲ್ಲಿ ವರದಿ ಬಿಡುಗಡೆಯಾಗಿದೆ. ಈ ವರದಿಗಾಗಿ ಒಟ್ಟು 50 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ರಸ್ತೆ ಅಪಘಾತಗಳಿಂದ ಉಂಟಾದ ಶೇಕಡಾ 43.13 ರಷ್ಟು ಸಾವುಗಳು ಈ ಮೊದಲ 10 ನಗರಗಳಲ್ಲಿಯೇ ಸಂಭವಿಸಿವೆ ಎಂದು ಹೇಳಿದೆ.
ಶ್ರೀನಗರ, ಅಮೃತಸರ ಮತ್ತು ಜಮ್‌ಶೆಡ್‌ಪುರ ಈ ಮೂರು ನಗರಗಳಲ್ಲಿ 2021 ರಲ್ಲಿ ಕಡಿಮೆ ರಸ್ತೆ ಅಪಘಾತ ಸಾವುಗಳು ಸಂಭವಿಸಿವೆ ಎಂದು ವರದಿ ಹೇಳಿವೆ.
ಕಳೆದ ವರ್ಷ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ಹಲವಾರು ಸಾವುಗಳು ಸಂಭವಿಸಿವೆ. ಕರ್ನಾಟಕ ಹೈಕೋರ್ಟ್ ಡಿಸೆಂಬರ್ ಮಧ್ಯದಲ್ಲಿ ರಾಜ್ಯ ಸರ್ಕಾರವು ಗುಂಡಿಗಳಿಂದ ಉಂಟಾದ ಅಪಘಾತಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸುವಂತೆ ಆದೇಶಿಸಿದೆ.
ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳನ್ನು ಸಾವಿನ ಬಲೆಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ಘಟನೆಯಲ್ಲಿ, 55 ವರ್ಷದ ಬೈಕ್ ಸವಾರರೊಬ್ಬರು ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸುವಾಗ ಕಾಲು ಜಾರಿ ಬಿದ್ದು, ಟ್ರ್ಯಾಕ್ಟರ್ ಅವರ ಮೇಲೆ ಹರಿದು ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಟೋಬರ್ 2021 ರಿಂದ ಇಂತಹದ್ದೇ ದುರಂತ ಘಟನೆಗಳಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications