ದಿನಕ್ಕೆ 2 ಗಂಟೆ ಕೆಲಸ, 1.25 ಲಕ್ಷ ಸಂಬಳದ MNC ಉದ್ಯೋಗ ಬಿಟ್ಟು ಸ್ಟಾರ್ಟ್‌ಅಪ್ ಸೇರಿದ ಟೆಕ್ಕಿಗೆ ಈಗ ದಿನವೂ ಕಣ್ಣೀರು
ಬೆಂಗಳೂರು: ಕೈತುಂಬಾ ಸಂಬಳ, ದಿನಕ್ಕೆ ಕೇವಲ ಒಂದೆರಡು ಗಂಟೆಗಳ ಕೆಲಸ, ಆರಾಮದಾಯಕ ಜೀವನ... ಇಂತಹದೊಂದು ಅತ್ಯುತ್ತಮ ಎಂಎನ್‌ಸಿ ಕೆಲಸವನ್ನು ಬಿಟ್ಟು, ಹೊಸತೇನಾದರೂ ಕಲಿಯಬೇಕು ಎಂಬ ಆಸೆಯಿಂದ ಸ್ಟಾರ್ಟ್‌ಅಪ್ ಕಂಪನಿಗೆ ಸೇರಿದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಇದೀಗ ಕಣ್ಣೀರು ಹಾಕುವಂತಾಗಿದೆ. ಕೆಲಸಕ್ಕೆ ಸೇರಿದ ಕೇವಲ ಮೂರೇ ವಾರಗಳಲ್ಲಿ ತಮ್ಮ ನಿರ್ಧಾರದ ಬಗ್ಗೆ ತೀವ್ರ ಪಶ್ಚಾತ್ತಾಪ ಪಡುತ್ತಿರುವ ಈ ಟೆಕ್ಕಿ, ಹೇಗಾದರೂ ಮಾಡಿ ಮತ್ತೆ ಕಾರ್ಪೊರೇಟ್ ಜಗತ್ತಿಗೆ ಮರಳಲು ಉಪಾಯಗಳನ್ನು ಹುಡುಕುತ್ತಿದ್ದಾರೆ.
ತಮ್ಮ ಈ ಸಂಕಟವನ್ನು ಸಾಮಾಜಿಕ ಜಾಲತಾಣ 'ರೆಡ್ಡಿಟ್'ನಲ್ಲಿ ಸುದೀರ್ಘವಾಗಿ ಹಂಚಿಕೊಂಡಿರುವ ಅವರು, "ನಾನು ಇತ್ತೀಚೆಗಷ್ಟೇ ಸ್ಟಾರ್ಟ್‌ಅಪ್ ಒಂದಕ್ಕೆ ಸೇರಿದೆ ಮತ್ತು ಈಗಲೇ ನಾನು ಪಶ್ಚಾತ್ತಾಪ ಪಡುತ್ತಿದ್ದೇನೆ. ಮತ್ತೆ ಎಂಎನ್‌ಸಿಗೆ ಬದಲಾಗಲು ಸಲಹೆಗಳು ಬೇಕಿವೆ" ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದ್ದಾರೆ.

ದಿನಕ್ಕೆ ಕೇವಲ 2 ಗಂಟೆ ಕೆಲಸ, 1.25 ಲಕ್ಷ ರೂ. ಸಂಬಳ
ಈ ಟೆಕ್ಕಿ ಹಿಂದೆ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯೊಂದರಲ್ಲಿ 'ಜೆನೆರೇಟಿವ್ ಎಐ ಎಂಜಿನಿಯರ್' ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಿಂಗಳಿಗೆ ಸುಮಾರು 1.25 ಲಕ್ಷ ರೂಪಾಯಿ ಸಂಬಳ ಸಿಗುತ್ತಿತ್ತು. ಆದರೆ, ಅವರು ದಿನಕ್ಕೆ ಕೇವಲ 1 ರಿಂದ 2 ಗಂಟೆಗಳು ಮಾತ್ರ ಕೆಲಸ ಮಾಡುತ್ತಿದ್ದರು! "ನನಗೆ ಐಟಿಯಲ್ಲಿ 9-10 ವರ್ಷಗಳ ಅನುಭವದ ಹಂತಕ್ಕೆ ತಲುಪಿದಾಗಲೂ, ತಂತ್ರಜ್ಞಾನದಲ್ಲಿ ಪ್ರಸ್ತುತವಾಗಿರಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಇಷ್ಟವಿತ್ತು. ಹಾಗಾಗಿ ನಾನು ಹೊಸ ಅವಕಾಶಗಳಿಗಾಗಿ ಹುಡುಕಾಟ ಆರಂಭಿಸಿದೆ" ಎಂದು ಅವರು ಬರೆದುಕೊಂಡಿದ್ದಾರೆ.
ಈ ಹುಡುಕಾಟದ ಫಲವಾಗಿ, ಸುಮಾರು 600 ದಶಲಕ್ಷ ಡಾಲರ್ ಮೌಲ್ಯದ ಬೃಹತ್ ಸ್ಟಾರ್ಟ್‌ಅಪ್ ಕಂಪನಿಯೊಂದರಲ್ಲಿ ಅವರಿಗೆ ಅವಕಾಶ ಒಲಿದುಬಂದಿತು. ಈ ಹೊಸ ಕಂಪನಿಯಲ್ಲಿ ಅವರಿಗೆ ವಾರ್ಷಿಕ 27 ಲಕ್ಷ ರೂ. ಪ್ಯಾಕೇಜ್ ಕೂಡ ನೀಡಲಾಗಿತ್ತು. ಒಟ್ಟು 4 ವರ್ಷಗಳ ಅನುಭವ ಹೊಂದಿರುವ ಈ ಟೆಕ್ಕಿ, ಹೊಸ ಕನಸುಗಳೊಂದಿಗೆ ಎಂಎನ್‌ಸಿ ಬಿಟ್ಟು ಸ್ಟಾರ್ಟ್‌ಅಪ್‌ಗೆ ಕಾಲಿಟ್ಟರು.
ಆದರೆ, ಹೊಸ ಕಂಪನಿಗೆ ಸೇರಿದ ಕೇವಲ 3 ವಾರಗಳಲ್ಲಿಯೇ ಅವರ ಕನಸುಗಳು ನುಚ್ಚುನೂರಾಗಿವೆ. ಅಲ್ಲಿನ ಮ್ಯಾನೇಜರ್‌ನ 'ಮೈಕ್ರೋಮ್ಯಾನೇಜ್ಮೆಂಟ್' ಅಂದರೆ ಪ್ರತಿಯೊಂದು ಸಣ್ಣ ಕೆಲಸಕ್ಕೂ ಅತಿಯಾಗಿ ನಿಯಂತ್ರಿಸುವ ಶೈಲಿಯ ಬಗ್ಗೆ ಸಹೋದ್ಯೋಗಿಗಳು ಎಚ್ಚರಿಸಲು ಶುರುಮಾಡಿದರು. "ಎರಡು ವಾರಗಳ ಹಿಂದೆ ನಾನು ಆತನೊಂದಿಗೆ ಮೀಟಿಂಗ್ ಮಾಡಿದೆ. ಆಗ ಇತರರು ಆತನ ಬಗ್ಗೆ ಏಕೆ ಹಾಗೆ ಮಾತನಾಡುತ್ತಿದ್ದರು ಎಂಬುದು ನನಗೆ ಅರ್ಥವಾಯಿತು" ಎಂದು ಟೆಕ್ಕಿ ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, ಅವರು ಯಾವ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲು ಆಸೆಪಟ್ಟಿದ್ದರೋ, ಆ ಕೆಲಸ ಅಲ್ಲಿರಲಿಲ್ಲ. "ಈ ಕೆಲಸವು ನನ್ನ ದೀರ್ಘಾವಧಿಯ ವೃತ್ತಿಜೀವನದ ಗುರಿಗಳಿಗೆ ಖಂಡಿತವಾಗಿಯೂ ಹೊಂದಿಕೆಯಾಗುತ್ತಿಲ್ಲ ಮತ್ತು ನಾನು ಇಲ್ಲಿಂದ ಹೊರಬರಲು ಬಯಸುತ್ತೇನೆ. ನಾನು ಕಡಿಮೆ ಸಂಬಳಕ್ಕೆ ಹೋಗಲೂ ಸಿದ್ಧನಿದ್ದೇನೆ, ನಾನಿಲ್ಲಿರುವುದನ್ನು ದ್ವೇಷಿಸುತ್ತೇನೆ" ಎಂದು ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಹಳೆಯ ಕಂಪನಿ ನೆನಪಿಸಿಕೊಂಡು ಪಶ್ಚಾತ್ತಾಪ
ತಮ್ಮ ಹಳೆಯ ಕಂಪನಿಯ ಕೆಲಸದ ಸಂಸ್ಕೃತಿಯನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿರುವ ಈ ಉದ್ಯೋಗಿ, "ನಾನು ಪ್ರತಿದಿನವೂ ಹಳೆಯ ಕೆಲಸವನ್ನು ಏಕೆ ಬಿಟ್ಟೆ ಎಂದು ಕೊರಗುತ್ತಿದ್ದೇನೆ. ಉತ್ತಮ ಮ್ಯಾನೇಜರ್ ಮತ್ತು ಉತ್ತಮ ತಂಡದ ಪ್ರಾಮುಖ್ಯತೆ ಏನು ಎಂಬುದು ಈಗ ನನಗೆ ಅರಿವಾಗಿದೆ. ಹಳೆಯ ಕಂಪನಿಯಲ್ಲಿಯೇ ಉಳಿಯುವ ಬದಲು ಈ ಹೊಸ ಕೆಲಸಕ್ಕೆ ಬದಲಾಗಿದ್ದಕ್ಕೆ ನಾನೊಬ್ಬ ಮೂರ್ಖನಂತೆ ಭಾಸವಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸ್ಟಾರ್ಟ್‌ಅಪ್‌ನಲ್ಲಿ 3 ತಿಂಗಳು ಪೂರೈಸಿದ ನಂತರ ಹೊಸ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವು ಬಳಕೆದಾರರು ಕಾಮೆಂಟ್‌ಗಳ ಮೂಲಕ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಬ್ರೋ, ನಾನೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ, ಆದರೆ ನನ್ನ ಹಳೆಯ ಕಂಪನಿಯೂ ಕಳಪೆಯಾಗಿತ್ತು, ಈಗಿನ ಕಂಪನಿಯಲ್ಲಿ ಬೆಳವಣಿಗೆಯೇ ಇಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಪ್ರತಿ ಕಂಪನಿಯೂ ವಿಭಿನ್ನವಾಗಿರುತ್ತದೆ. ನೀವು ಕೆಲಸ ಬದಲಾಯಿಸುವ ಮುನ್ನ ಆನ್‌ಲೈನ್‌ನಲ್ಲಿ ಅಥವಾ ಹಳೆಯ ಉದ್ಯೋಗಿಗಳೊಂದಿಗೆ ವಿಚಾರಿಸಬೇಕಿತ್ತು" ಎಂದು ಸಲಹೆ ನೀಡಿದ್ದಾರೆ. "ಎಂಎನ್‌ಸಿಗಳು ಕೂಡ ಇದೇ ರೀತಿ ಇರಬಹುದು. ಈಗ ಯಾವ ಕಂಪನಿಯೂ ಸರಿಯಿಲ್ಲ" ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications