ರೈಲ್ವೆ ಹಳಿಗೆ ಕಸ ಸುರಿಯುವ ಮುನ್ನ ಎಚ್ಚರ: ಇನ್ಮುಂದೆ ಬೀಳಲಿದೆ ಭಾರೀ ದಂಡ, ವಾಹನವೂ ಜಪ್ತಿ

ಬೆಂಗಳೂರು: ನಗರದ ಎಲ್ಲೆಂದರಲ್ಲಿ ಕಸ ಬಿಸಾಡುವ ಅಭ್ಯಾಸವಿದ್ದವರೂ, ಅದರಲ್ಲೂ ವಿಶೇಷವಾಗಿ ರೈಲ್ವೆ ಹಳಿಗಳ ಮೇಲೆ ತ್ಯಾಜ್ಯ ಸುರಿಯುವವರು ಇಂದೇ ಎಚ್ಚೆತ್ತುಕೊಳ್ಳಿ. ಇನ್ಮುಂದೆ ರೈಲ್ವೆ ಟ್ರ್ಯಾಕ್ ಅಥವಾ ಅದರ ಆವರಣದಲ್ಲಿ ಕಸ ಬಿಸಾಕಿದರೆ ಕೇವಲ ದಂಡ ಮಾತ್ರವಲ್ಲ, ತ್ಯಾಜ್ಯ ತಂದು ಸುರಿಯುವ ವಾಹನಗಳನ್ನ ಕೂಡ ಜಪ್ತಿ ಮಾಡಲು ಕಠಿಣ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಲು ನೈರುತ್ಯ ರೈಲ್ವೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಸಜ್ಜಾಗಿವೆ.

ರೈಲ್ವೆ ನಿಲ್ದಾಣ ಮತ್ತು ಹಳಿಗಳ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ರೈಲ್ವೆ ಹಳಿಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಕಸದ ತೊಟ್ಟಿಯಂತೆ ಬಳಸಿಕೊಳ್ಳುತ್ತಿರುವ ಸಾರ್ವಜನಿಕರು ಮತ್ತು ಖಾಸಗಿ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

Strict Fines

ರೈಲ್ವೆ ಕಾಯ್ದೆಯ ಪ್ರಕಾರ, ರೈಲು ಹಳಿ ಅಥವಾ ಆವರಣದಲ್ಲಿ ಕಸ ಹಾಕಿದರೆ, ಉಗುಳಿದರೆ ಅಥವಾ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡಿದರೆ 100 ರಿಂದ 500 ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಆದರೆ, ಈ ನಿಯಮ ಪ್ರಸ್ತುತ ಕೇವಲ ರೈಲ್ವೆ ನಿಲ್ದಾಣಗಳ ಒಳಗೆ ಮತ್ತು ಆವರಣದಲ್ಲಿ ಮಾತ್ರ ಪಾಲನೆಯಾಗುತ್ತಿದೆ. ನಿಲ್ದಾಣದ ಒಳಗೆ ತಪ್ಪು ಮಾಡುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ, ರೈಲು ನಿಲ್ದಾಣದಿಂದ ಹೊರಗೆ, ನಗರದ ಮಧ್ಯೆ ಹಾದುಹೋಗುವ ಹಳಿಗಳ ಮೇಲೆ ಬೇಕಾಬಿಟ್ಟಿ ತ್ಯಾಜ್ಯ ಎಸೆಯುತ್ತಿದ್ದಾರೆ.

ಬೆಂಗಳೂರು-ರಾಜಾನುಕುಂಟೆ, ಬೆಂಗಳೂರು-ಯಲಹಂಕ, ಬೆಂಗಳೂರು-ಕಾರ್ಮೆಲಾರಾಂ, ಬೆಂಗಳೂರು-ಕೆಂಗೇರಿ, ಹಾಗೂ ಬೆಂಗಳೂರು-ವೈಟ್‌ಫೀಲ್ಡ್ ಮಾರ್ಗಗಳಲ್ಲಿ ರೈಲ್ವೆ ಹಳಿಗಳನ್ನ ಸಾರ್ವಜನಿಕರು ಕಸ ಎಸೆಯುವ ಜಾಗವೆಂದು ಭಾವಿಸಿದ್ದಾರೆ. ಕಟ್ಟಡ ತ್ಯಾಜ್ಯ, ಘನತ್ಯಾಜ್ಯಗಳನ್ನ ಈ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ತಂದು ಸುರಿಯುತ್ತಿದ್ದಾರೆ. ರೈಲ್ವೆ ಮೇಲ್ಸೇತುವೆಗಳಲ್ಲಿ ಜಾಲರಿಗಳನ್ನ ಅಳವಡಿಸಿದ್ದರೂ ಕೂಡ, ವಾಹನಗಳಲ್ಲಿ ಬಂದು ಕಸದ ಚೀಲಗಳನ್ನ, ರೈಲು ಹೋಗುವಾಗಲೇ ಕೆಳಗೆ ಎಸೆಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಳೇ ಇದೆ.

ನೈರುತ್ಯ ರೈಲ್ವೆ ಮತ್ತು ಜಿಬಿಎ ಜಂಟಿ ಕಾರ್ಯಾಚರಣೆ

ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, "ರೈಲ್ವೆ ಹಳಿಗಳ ಮೇಲೆ ಸುರಿಯುತ್ತಿರುವ ಕಸ ರೈಲ್ವೆ ಇಲಾಖೆಗೆ ಸೇರಿದ್ದಲ್ಲ. ಆದರೆ ಸ್ಥಳೀಯರು ಮತ್ತು ಖಾಸಗಿ ವಾಹನಗಳಲ್ಲಿ ತಂದು ಹಾಕುತ್ತಿರುವ ಕಸಕ್ಕೆ ರೈಲ್ವೆ ಇಲಾಖೆ ಹೊಣೆ ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ತಡೆಗಟ್ಟಲು ಕೇವಲ ರೈಲ್ವೆಯಿಂದ ಸಾಧ್ಯವಿಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಜೊತೆಗೂಡಿ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ," ಎಂದು ತಿಳಿಸಿದ್ದಾರೆ.

ಕೆಲವೊಮ್ಮೆ ನಗರ ಪಾಲಿಕೆಯ ವಾಹನಗಳು ಕೂಡ ಟ್ರ್ಯಾಕ್ ಪಕ್ಕದಲ್ಲಿ ಕಸ ಸುರಿಯುತ್ತಿವೆ. ಇದನ್ನು ನಿಯಂತ್ರಿಸಲು ಕಸ ಸುರಿಯುವ ವಾಹನಗಳನ್ನ ಜಪ್ತಿ ಮಾಡುವುದು ಮುಂದಿನ ದಿನಗಳಲ್ಲಿ ಅನಿವಾರ್ಯ. ಜೊತೆಗೆ ಭಾರಿ ಮೊತ್ತದ ದಂಡ ವಿಧಿಸಿದರೆ ಮಾತ್ರ ಜನರಲ್ಲಿ ಭಯ ಮೂಡುತ್ತದೆ. ಇದು ಕೇವಲ ಒಂದು ದಿನ ಅಥವಾ ಒಂದು ತಿಂಗಳ ಕಾರ್ಯಾಚರಣೆಯಲ್ಲ, ನಿರಂತರವಾಗಿ ಜಾಗೃತಿ ಮೂಡಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜೊತೆ ನಿರ್ಣಾಯಕ ಸಭೆ

ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜುಲೈ 25ರಂದು ಅಂದರೆ ಇಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಮಹತ್ವದ ಸಭೆಯನ್ನ ಆಯೋಜಿಸಲಾಗಿದೆ. ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಡೆಯಲು ಜಿಬಿಎ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಜಿಬಿಎಯ ಬೆಂಬಲದೊಂದಿಗೆ ಕಾರ್ಯಾಚರಣೆಗೆ ಇಳಿದರೆ ರೈಲ್ವೆ ಹಳಿಗಳ ಮೇಲಿನ ತ್ಯಾಜ್ಯ ಸಮಸ್ಯೆಗೆ ಶೀಘ್ರವೇ ಕಡಿವಾಣ ಬೀಳಲಿದೆ. ಈ ಮಹತ್ವದ ಸಮನ್ವಯ ಸಭೆಗೆ ಜಿಬಿಎ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನೂ ಆಹ್ವಾನಿಸಲಾಗಿದೆ ಎಂದು ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+