ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಶ್ರುತಿ ಹರಿಹರನ್ ಅರ್ಜಿ
ಬೆಂಗಳೂರು, ನವೆಂಬರ್ 13 : ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟಿ ಶ್ರುತಿ ಹರಿಹರನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ಬುಧವಾರ ನಡೆಯುವ ಸಾಧ್ಯತೆ ಇದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನಟ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರು ನೀಡಿದ ದೂರಿನ ಅನ್ವಯ ಶ್ರುತಿ ಹರಿಹರನ್ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ಎಫ್‌ಐಆರ್ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ.

ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅರ್ಜುನ್ ಸರ್ಜಾ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಆದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿತ್ತು.
ಐಟಿ ಕಾಯ್ದೆ 200ರ ಅಡಿ ಶ್ರುತಿ ಹರಿಹರನ್ ಮತ್ತು ಇತರರ ವಿರುದ್ಧ ದೂರು ದಾಖಲು ಮಾಡಿಕೊಂಡು ಎಫ್ಐಆರ್ ಹಾಕಲಾಗಿದೆ. ನಟ ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬದ ವಿರುದ್ಧ ಒಳಸಂಚು ರೂಪಿಸಿ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. 'ವಿಸ್ಮಯ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೆಟ್ಟ ಅನುಭವವಾಗಿದೆ ಎಂದು ದೂರಿದ್ದರು.
ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದು, ಅದರ ವಿಚಾರಣೆಯೂ ನ್ಯಾಯಾಲಯದಲ್ಲಿ ನಡೆಯುತ್ತಿದೆ.












Click it and Unblock the Notifications