ಎಂಜಿ ರಸ್ತೆಯಿಂದ ಹೋಪ್ ಫಾರ್ಮ್‌ಗೆ ಪ್ರತ್ಯೇಕ ಬಸ್ ಮಾರ್ಗ
ಬೆಂಗಳೂರು, ಜನವರಿ 11 : ಬೆಂಗಳೂರಿನ ಎಂಜಿ ರಸ್ತೆ ಮತ್ತು ಹೋಪ್ ಫಾರ್ಮ್ ನಡುವೆ ಬಿಎಂಟಿಸಿ ಬಸ್ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದೆ. ಬಿಎಂಟಿಸಿಯ ವೋಲ್ವೊ ಬಸ್ಸುಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಓಲ್ಡ್ ಏರ್‌ಪೋರ್ಟ್ ರಸ್ತೆ, ದೊಮ್ಮಲೂರು, ಮಾರತ್‌ಹಳ್ಳಿ, ಐಟಿಪಿಬಿ, ವೈಟ್‌ಫೀಲ್ಡ್ ಮೂಲಕ ಈ ಪ್ರತ್ಯೇಕ ಮಾರ್ಗ ಹೋಪ್ ಫಾರ್ಮ್ ತಲುಪಲಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪತ್ಯೇಕ ಮಾರ್ಗ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. [ಬಿಎಂಟಿಸಿಯ ಐಟಿಎಸ್ ಯೋಜನೆ ಬಗ್ಗೆ ತಿಳಿಯಿರಿ]

ಯಾವ ಬಸ್ಸುಗಳು : ಮಾರತ್‌ಹಳ್ಳಿ, ವೈಟ್‌ಫೀಲ್ಡ್ ಮುಂತಾದ ಮಾರ್ಗಗಳಲ್ಲಿ ಸಾಗುವ ಬಿಎಂಟಿಸಿಯ ವೋಲ್ವೊ ಬಸ್ಸುಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಹಾಗೆಯೇ ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ಗೆ ಸಾಗುವ 335ಇ, 335 ಸಿ ಮುಂತಾದ ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. [ಬಿಎಂಟಿಸಿ ವೊಲ್ವೋ ಬಸ್ಸುಗಳಲ್ಲಿ ಉಚಿತ ವೈಫೈ ಸೇವೆ]
ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಈ ಮಾರ್ಗ ಹೇಗಿರಬೇಕು? ಎಂಬ ನಕ್ಷೆಯನ್ನು ತಯಾರು ಮಾಡಲಿದೆ. ಬಸ್ಸಿನ ಸಮಯ, ಬಸ್ ನಿಲ್ದಾಣಗಳ ಅಂತರ ಮುಂತಾದ ವಿಚಾರಗಳ ಕುರಿತು ಮುಂದಿನ ವಾರ ನಡೆಯುವ ಸಭೆಯಲ್ಲಿ ಅಂತಿಮ ಯೋಜನೆ ತಯಾರಿಸಲಾಗುತ್ತದೆ. [ಕ್ಯಾಬ್, ಟ್ಯಾಕ್ಸಿ, ಮಿನಿ ಬಸ್ ವಿರುದ್ಧ ಬಿಎಂಟಿಸಿ ಸಮರ]
ಬಿಎಂಟಿಸಿ, ಬಿಬಿಎಂಪಿ, ಡಲ್ಟ್‌ನ ಅಧಿಕಾರಿಗಳ ತಂಡ ಪ್ರತ್ಯೇಕ ಮಾರ್ಗ ಹೇಗಿರಬೇಕು? ಎಂಬ ಬಗ್ಗೆ ನಕ್ಷೆ ತಯಾರು ಮಾಡಲಿದೆ. ಪ್ರಾಯೋಗಿಕವಾದ ಈ ಯೋಜನೆ ಯಶಸ್ವಿಯಾದರೆ ಹೆಬ್ಬಾಳ-ಕೆಆರ್ ಪುರ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರಲು ಡಲ್ಟ್ ನಿರ್ಧರಿಸಿದೆ.












Click it and Unblock the Notifications