70 ಲಕ್ಷ ವೆಚ್ಚದಲ್ಲಿ ವಿಧಾನಸೌಧ ಸಭಾಂಗಣ ನವೀಕರಣ
ಬೆಂಗಳೂರು, ಜೂ. 17 : ಜೂ.23ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುವ ಹಿನ್ನಲೆಯಲ್ಲಿ ವಿಧಾನಸೌಧದ ಸಭಾಂಗಣದ ನವೀಕರಣ ಕಾಮಗಾರಿಗೆ ನಡೆಸಲಾಗುತ್ತಿದೆ. ಧ್ವನಿವರ್ಧಕ ವ್ಯವಸ್ಥೆ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಕೈಗೆತ್ತಿಕೊಂಡಿದ್ದು, ಮೂರು ದಿನಗಳಲ್ಲಿ ಇದು ಮುಗಿಯವು ಸಾಧ್ಯತೆ ಇದೆ.
ವಿಧಾನಸೌಧದ ಸಭಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಧಾನಮಂಡಲ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಮೈಕ್‌ಗಳು ಮತ್ತು ಸ್ಪೀಕರ್ ಗಳನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಸ್ತುತ ವಿಧಾನಸಭೆಯಲ್ಲಿ ಇಬ್ಬರು ಸದಸ್ಯರಿಗೆ ಒಂದು ಮೈಕ್ ಇದೆ. ಅದನ್ನು ಬದಲಿಸಿ, ಪ್ರತಿಯೊಬ್ಬರಿಗೂ ಒಂದೊಂದು ಪ್ರತ್ಯೇಕ ಮೈಕ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಎಂದು ಸ್ಪೀಕರ್ ಮಾಹಿತಿ ನೀಡಿದರು. ಮೈಕ್‌ಗಳನ್ನು ಲಂಡನ್ ನಿಂದ ತರಿಸಲಾಗಿದ್ದು, ಒಟ್ಟಾರೆ 70 ಲಕ್ಷ ವೆಚ್ಚದಲ್ಲಿ ನವೀಕರಣ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. [ವಿಧಾನಸೌಧದ ಪಕ್ಕದಲ್ಲಿ ಬೃಹತ್ ಗಾಂಧಿ ಪ್ರತಿಮೆ]
ಕಾಮಗಾರಿ ಬಾಕಿ ಇದೆ : ವಿಧಾನಸೌಧದ ಸಭಾಂಗಣದ ನೆಲಹಾಸು ಮತ್ತು ಕುರ್ಚಿಗಳ ಕುಷನ್ ಬದಲಿಸುವ ಕೆಲಸ ಬಾಕಿ ಉಳಿದಿದೆ. ಅಧಿವೇಶನದ ನಂತರ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, ಪಡಸಾಲೆ, ಶೌಚಗೃಹಗಳ ನವೀಕರಣ ಕೂಡ ಆ ಸಂದರ್ಭದಲ್ಲಿ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಹೇಳಿದ್ದಾರೆ.
100 ದಿನ ಅಧಿವೇಶನ : ಮುಂದಿನ ವರ್ಷದಿಂದ ಕನಿಷ್ಠ ನೂರು ದಿನ ಅಧಿವೇಶನ ನಡೆಸುವ ಉದ್ದೇಶವಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಈ ವರ್ಷ 60 ದಿನ ಅಧಿವೇಶನ ನಡೆಲಾಗುವುದು ಎಂದು ಅವರು ಮಾಹಿತಿ ನೀಡಿದರು. ಅಂದಹಾಗೆ ಜೂ.23ರಿಂದ 30ರವರೆಗೆ ಅಧಿವೇಶನ ನಡೆಯಲಿದೆ.


Click it and Unblock the Notifications
