SIR: ಬೆಂಗಳೂರಿನ ಮತದಾರರಿಗೆ ಗುಡ್‌ನ್ಯೂಸ್; ನೋಟಿಸ್ ಪಡೆದವರಿಗೆ ಮನೆಬಾಗಿಲಲ್ಲೇ ದಾಖಲೆ ಪರಿಶೀಲನೆ
SIR: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಗುಡ್‌ನ್ಯೂಸ್ ಕೊಡಲಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮ್ಯಾಪ್ ಆಗದೆ ಇರುವ ಹಾಗೂ ತಾರ್ಕಿಕ ವ್ಯತ್ಯಾಸಗಳು (Logical Discrepancies) ಇರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿರುವ ಮತದಾರರಿಗೆ ಅನುಕೂಲವಾಗುವಂತೆ ಭಾರತೀಯ ಚುನಾವಣಾ ಆಯೋಗವು ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದೆ. ಇದರ ಅನ್ವಯ ಬೆಂಗಳೂರಿನಲ್ಲೂ ಕೆಲವೊಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಈಗಾಗಲೇ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ ನೋಟಿಸ್ ನೀಡಲಾಗಿರುವ ಸಂಬಂಧಿಸಿದ ಮತದಾರರ ಮನೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ದಾಖಲೆಗಳನ್ನು ECINetನಲ್ಲಿ ಅಪ್‌ಲೋಡ್ ಮಾಡಿ, ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿ (ERO) ಅವರ ನಿರ್ಧಾರಕ್ಕೆ ಸಲ್ಲಿಸಲಾಗುತ್ತಿದೆ.

ಇಂತಹ ಪ್ರಕರಣಗಳಲ್ಲಿ ಮತದಾರರನ್ನು ಸಾಮಾನ್ಯವಾಗಿ ERO/AERO ಕಚೇರಿಗೆ ವಿಚಾರಣೆಗೆ ಕರೆಯುವ ಅಗತ್ಯವಿರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ERO ಅವರ ನಿರ್ಧಾರದಂತೆ ವಿಚಾರಣೆ ಅಗತ್ಯವಿದ್ದಲ್ಲಿ, ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ, ಮತದಾರರು ತಮ್ಮ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರನ್ನು ವಿಚಾರಣೆಗೆ ಹಾಜರಾಗಲು ಅಧಿಕೃತಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
SIR: ವಿಶೇಷ ಶಿಬಿರ ಹಾಗೂ ಹೆಲ್ಪ್‌ಡೆಸ್ಕ್‌ಗಳ ಮೂಲಕ ನೆರವು
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಅಗತ್ಯ ಮಾಹಿತಿ ಹಾಗೂ ನೆರವು ಒದಗಿಸಲು ವಿಶೇಷ ಶಿಬಿರಗಳು ಹಾಗೂ ಹೆಲ್ಪ್‌ಡೆಸ್ಕ್‌ಗಳನ್ನು ಸಹ ಈಗಾಗಲೇ ಆಯೋಜಿಸಲಾಗಿದೆ. SIR ಪ್ರಕ್ರಿಯೆಯಲ್ಲಿ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಅಗತ್ಯ ಮಾರ್ಗದರ್ಶನ ಹಾಗೂ ನೆರವು ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
SIR: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ
SIR ಸಂದರ್ಭದಲ್ಲಿ ಅಥವಾ ನಂತರ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಯಾವುದೇ ವ್ಯಕ್ತಿ, ಹಾಗೆಯೇ ಅರ್ಹ ಯುವ ಹಾಗೂ ಮೊದಲ ಬಾರಿಗೆ ಮತದಾರರು, ನಿರಂತರ ಪರಿಷ್ಕರಣೆ ಪ್ರಕ್ರಿಯೆಯಡಿ ಸಂಬಂಧಿಸಿದ EROಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಬಹುದು. ಅರ್ಹ ಮತದಾರರ ನೋಂದಣಿಗೆ ಅನುಕೂಲವಾಗುವಂತೆ ವಿಶೇಷ ಅಭಿಯಾನ ಕೈಗೊಳ್ಳಲು DEOಗಳು ಹಾಗೂ EROಗಳಿಗೆ ಭಾರತ ಚುನಾವಣಾ ಆಯೋಗವು ಸೂಚಿಸಿದೆ.
ಅಧಿಕೃತ ಮಾಹಿತಿಯನ್ನು ಪಡೆಯಲು ಮನವಿ
SIR, ಮತದಾರರ ನೋಂದಣಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕ್ರಿಯೆಗಳ ಕುರಿತು ನಾಗರಿಕರು ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಅಧಿಕೃತ ಹೆಲ್ಪ್‌ಡೆಸ್ಕ್‌ಗಳ ಮೂಲಕ ಮಾಹಿತಿ ಪಡೆದು, ನಿಗದಿತ ಪ್ರಕ್ರಿಯೆಯಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.


Click it and Unblock the Notifications
