BMTC: ಬೆಂಗಳೂರಿಗೆ ಬಂದು ಸುಮ್ಮನೆ ನಿಂತ 320 ಎಲೆಕ್ಟ್ರಿಕ್ ಬಸ್‌ಗಳು
ಬೆಂಗಳೂರು, ಮಾರ್ಚ್ 01: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಲವಾರು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ. ನಗರದಲ್ಲಿ ಹೊಸದಾಗಿ ಹಲವು ಈ ಮಾದರಿಯ ಬಸ್‌ಗಳ ಸಂಚಾರಕ್ಕೆ ಪ್ರಾಯೋಗಿಕ ಸಂಚಾರವೂ ಸಹ ನಡೆಯುತ್ತಿದೆ. ಹಂತ-ಹಂತವಾಗಿ ಇನ್ನಷ್ಟು ಇ-ಬಸ್‌ಗಳನ್ನು ಓಡಿಸಲು ಸಹ ಬಿಎಂಟಿಸಿ ಮುಂದಾಗಿದೆ. ಸದ್ಯ 320 ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದೆ. ಆದರೆ ಬಸ್‌ಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಎಲೆಕ್ಟ್ರಿಕ್ ಬಸ್‌ಗಳು ಪ್ರಮುಖ ಪಾತ್ರವನ್ನು ವಹಿಸಲಿವೆ. ಇದಕ್ಕಾಗಿ ಬಿಎಂಟಿಸಿ 320 ಬಸ್‌ಗಳನ್ನು ಓಡಿಸಲಿದೆ. ಆದರೆ ಈ ಬಸ್‌ಗಳ ಸಂಚಾರಕ್ಕೆ ಚಾಲಕರ ಕೊರತೆ ಉಂಟಾಗಿದೆ. ಆದ್ದರಿಂದ ಬಸ್‌ಗಳು ರಸ್ತಗಿಳಿದಿಲ್ಲ.

ಅಶೋಕ್ ಲೈಲ್ಯಾಂಡ್ ಕಂಪನಿಯ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಬಿಎಂಟಿಸಿ ಪಡೆದುಕೊಂಡಿದೆ. ಫೆಬ್ರವರಿ 1ರಿಂದ ಈ ಬಸ್‌ಗಳು ನಗರದಲ್ಲಿ ಸಂಚಾರವನ್ನು ನಡೆಸಬೇಕಿತ್ತು. ಆದರೆ ಮಾರ್ಚ್ ತಿಂಗಳು ಬಂದರೂ ಬಸ್‌ಗಳು ಸಂಚಾರವನ್ನು ಆರಂಭಿಸಿಲ್ಲ.
ಚಾಲಕರು ಇಲ್ಲ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆಗೆ ಪಡೆಯುವಾಗ ನಿಯಮವೊಂದನ್ನು ರೂಪಿಸಿದೆ. ಬಸ್‌ಗಳಿಗೆ ಚಾಲಕರನ್ನು ಬಸ್ ಗುತ್ತಿಗೆ ನೀಡುವ ಕಂಪನಿಯೇ ನೀಡಬೇಕು. ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೀಡಲಿದೆ.
ಈಗ ನಗರದಲ್ಲಿ ಸಂಚಾರ ನಡೆಸಲು 320 ಎಲೆಕ್ಟ್ರಿಕ್ ಬಸ್‌ಗಳು ಸಿದ್ಧವಾಗಿದೆ. ಆದರೆ ಅದನ್ನು ಓಡಿಸಲು ಚಾಲಕರು ಇಲ್ಲದ ಕಾರಣ ಬಸ್ ಸಂಚಾರ ಆರಂಭವಾಗಿಲ್ಲ. ಚಾಲಕರನ್ನು ಕಂಪನಿಯೇ ನೇಮಕಾತಿ ಮಾಡಿಕೊಂಡು ಬಸ್ ಸಂಚಾರಕ್ಕೆ ಚಾಲನೆ ನೀಡಲು ಇನ್ನಷ್ಟು ಸಮಯ ಬೇಕು ಎಂದು ನಿರೀಕ್ಷೆ ಮಾಡಲಾಗಿದೆ.
ಈ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರ ನಗರದಲ್ಲಿ ಯಶಸ್ವಿಯಾಗಿದೆ. ಬಸ್‌ಗಳನ್ನು ಓಡಿಸಲು ಒಪ್ಪಿಗೆಯೂ ಸಿಕ್ಕಿದೆ. ಬಸ್‌ಗಳು ಸಿದ್ಧವಾಗಿದ್ದರೂ ಸಹ ಚಾಲಕರು ಇಲ್ಲ. ಬಿಎಂಟಿಸಿ ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನು ನೇಮಕಾತಿ ಮಾಡಿಕೊಂಡು ಬಸ್ ಓಡಿಸುವ ಚಿಂತನೆ ನಡೆಸಿತ್ತು. ಆದರೆ, ಏಜೆನ್ಸಿ ಮೂಲಕ ನೇಮಕ ಹೊಂದಲು ಚಾಲಕರು ಆಸಕ್ತಿ ಹೊಂದಿಲ್ಲ. ಆದ್ದರಿಂದ ಬಸ್ ನಿಲ್ದಾಣ ಬಿಟ್ಟು ಆಚೆ ಬಂದಿಲ್ಲ.
ಕಂಪನಿ ಮೂಲಕ ನೇಮಕವಾಗುವ ಬಸ್ ಚಾಲಕರಿಗೆ 35 ರಿಂದ 40 ಸಾವಿರ ರೂ. ವೇತನ ಸಿಗಲಿದೆ. ಇದು ಕಡಿಮೆ ಎಂಬ ಕಾರಣಕ್ಕೆ ಚಾಲಕರು ಒಪ್ಪಿಗೆ ನೀಡುವುದಿಲ್ಲ. ಏಜೆನ್ಸಿ ಮೂಲಕ ಚಾಲಕರು ನೇಮಕಗೊಂಡರೆ ಅವರಿಗೆ 18-20 ಸಾವಿರ ರೂ. ವೇತನ ನೀಡಲಾಗುತ್ತದೆ. ಆದ್ದರಿಂದ ಯಾರೂ ಸಹ ಆಸಕ್ತಿ ತೋರಿಸಿಲ್ಲ.
ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗಿದೆ. ಮೆಜೆಸ್ಟಿಕ್-ಕಾಡುಗೋಡಿ ಮಾರ್ಗದಲ್ಲಿ ಬಸ್‌ಗಳು ಪ್ರಾಯೋಗಿಕ ಸಂಚಾರವನ್ನು ನಡೆಸಿವೆ. 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಬಿಎಂಟಿಸಿ ಬಸ್‌ಗಳನ್ನು ಪಡೆದಿದ್ದು, ಪ್ರತಿ ಕಿ. ಮೀ.ಗೆ ಸುಮಾರು 68 ರೂ. ನೀಡಲಿದೆ ಎಂಬ ಮಾಹಿತಿ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಫೆಬ್ರವರಿಯಲ್ಲಿ ನಿಗದಿಗೊಳಿಸಲಾಗಿತ್ತು. ಆದರೆ ಇನ್ನೂ ಸಹ ಚಾಲಕರು ಸಿಗದ ಕಾರಣ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಆರಂಭಿಸಿಲ್ಲ.
ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಚಾಲಕರನ್ನು ಸಹ ಕಂಪನಿಯವರೇ ನೇಮಕ ಮಾಡುವ ಕಾರಣ ಬಿಎಂಟಿಸಿಗೆ ಹಣ ಉಳಿತಾಯವಾಗುತ್ತದೆ. ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೀಡಿ, ಬಸ್‌ಗಳ ಸಂಚಾರವನ್ನು ಆರಂಭಿಸುತ್ತದೆ.












Click it and Unblock the Notifications