Shocking: ಬೆಂಗಳೂರಿನ ವಿದೇಶಿ ಪೋಸ್ಟ್ ಆಫೀಸ್ಗಳಿಗೆ ವಿದೇಶಗಳಿಂದ ಮಾದಕ ವಸ್ತು ಪಾರ್ಸಲ್
ಬೆಂಗಳೂರು ಅಕ್ಟೋಬರ್ 6: ಮಾದಕ ವಸ್ತುಗಳ ಮಾರಾಟವನ್ನು ತಡೆಯಲು ಪೊಲೀಸರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೂ ಕೂಡ ಬೆಂಗಳೂರಿನ ವಿದೇಶಿ ಪೋಸ್ಟ್ ಆಫೀಸ್ಗಳಿಗೆ ವಿದೇಶಗಳಿಂದ ಮಾದಕ ವಸ್ತು ಪಾರ್ಸಲ್ ಬಂದಿರುವುದು ವರದಿಯಾಗಿದೆ. ವಿದೇಶದಿಂದ ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಮಾದಕ ವಸ್ತು ಪೋಸ್ಟ್ ಆಫೀಸ್‌ಗೆ ಬಂದಿರುವುದು ಗೊತ್ತಾಗಿದೆ.
ವಿದೇಶದಿಂದ ಪಾರ್ಸಲ್ ಮೂಲಕ ಎಂಡಿಎಂಎ, ಕೊಕೇನ್ ಹಾಗೂ ಬ್ರೌನ್ ಶುಗರ್ ಬೆಂಗಳೂರಿಗೆ ಪ್ರವೇಶಿಸುತ್ತಿದೆ. ಈ ಬಗ್ಗೆ ಪೋಸ್ಟ್ ಆಫೀಸ್ ಸಿಬ್ಬಂದಿಗಳು ಸಿಸಿಬಿಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರ ಅಕ್ಟೋಬರ್ 1ರಂದು ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ ಬರೋಬ್ಬರಿ 626 ಮಾದಕ ವಸ್ತು ಇರುವ ಪಾರ್ಸಲ್ ಬಾಕ್ಸ್‌ಗಳು ಪತ್ತೆಯಾಗಿವೆ. ಆದರೆ ಈ ಪಾರ್ಸಲ್ ಯಾರಿಗೆ ಬಂದಿದೆ ಎಂಬುದು ಮಾತ್ರ ಗೊತ್ತಾಗಿಲ್ಲ.

ಶ್ವಾನದಳದ ಸಮೇತ ಸಿಸಿಬಿ ಅಧಿಕಾರಿಗಳು ಪೋಸ್ಟ್ ಆಫೀಸ್ ಅನ್ನು ಜಾಲಾಡಿದ್ದಾರೆ. ಕೆಲ ಬಾಕ್ಸ್‌ಗಳ ಮೇಲೆ ಅನುಮಾನ ಬಂದು ಅದರ ಮಾದರಿ ಪರೀಕ್ಷೆಗೆ ಕಳುಹಿಸಿದಾಗ ಅದು ಮಾದಕ ವಸ್ತು ಎನ್ನುವುದು ದೃಢಪಟ್ಟಿದೆ. ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಆರೋಪಿಗಳು ಪಾರ್ಸೆಲ್ ಕಳುಹಿಸುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ದಾಳಿ ವೇಳೆ ಎಲ್ಲವನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಅಂದರೆ 2018ರಲ್ಲೂ ಇದೇ ರೀತಿಯಾಗಿ ಕೃತ್ಯ ನಡೆದಿತ್ತು. ಈ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ಪಾರ್ಸಲ್ ಬಂದ ಸ್ಥಳದ ಮಾಹಿತಿ ಹಾಗೂ ಯಾರಿಗೆ ಪಾರ್ಸಲ್ ಬಂದಿದೆ ಎನ್ನುವ ಬಗ್ಗೆ ಪತ್ತೆ ಕಾರ್ಯವನ್ನು ಶುರು ಮಾಡಿದ್ದಾರೆ.

ಡ್ರಗ್ ವಿಚಾರವಾಗಿ 2020ರಲ್ಲಿ ಸ್ಯಾಂಡಲ್ ವುಡ್ ನಟಿಯರು ಜೈಲಿಗೆ ಹೋದರು. ರಾಜಕಾರಣಿಗಳ ಮಕ್ಕಳ ಕೈಗೆ ಕೋಳ ತೊಡಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಬೇಧಿಸಿದ ಸಿಸಿಬಿ ಪೊಲೀಸರಿಗೆ ಪ್ರಸ್ತುತ ವಿದೇಶದಿಂದ ಮಾದಕವಸ್ತುವಿನ ಪಾರ್ಸಲ್ ಎಲ್ಲಿಯದ್ದು ಹಾಗೂ ಯಾರಿಗೆ ಬಂದಿದೆ ಎಂದು ಪತ್ತೆ ಹಚ್ಚುವುದು ಸವಾಲಾಗಿದೆ.
ಯಾಕೆಂದರೆ ಪಾರ್ಸಲ್ ಬಂದ ವಿಳಾಸ, ಹೆಸರಿನವರು ಯಾರೂ ಇಲ್ಲ. ಹಾಗಿದ್ದಮೇಲೆ ಆ ಪಾರ್ಸಲ್ ಯಾರಿಗೆ ಬಂದಿದೆ ಎನ್ನುವುದು ಪತ್ತೆ ಮಾಡುವುದು ಸುಲಭವಲ್ಲ. ಜೊತೆಗೆ ಪಾರ್ಸಲ್ ಯಾವ ವಿಳಾಸದಿಂದ ಬಂದಿದೆ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಡ್ರಗ್ ಹೇಗೆ ಬರುತ್ತೆ?
ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಸಿಂಥೆಟಿಕ್ ಡ್ರಗ್ ಸಾಗಣೆ ಮಾಡುವ ಮಾರ್ಗಗಳು ಬದಲಾಗಿವೆ. ವಿದೇಶಗಳಿಂದ ಡ್ರಗ್ ನ್ನು ಪ್ಲೈಟ್ ಮೂಲಕ ತರಿಸಿಕೊಳ್ಳುವ ಕಾಲ ಬದಲಾಗಿದೆ. ಇದೀಗ ಏನಿದ್ದರೂ ಡಾರ್ಕ್ ವೆಬ್ ತಾಣದ ಮೂಲಕ ಹ್ಯಾಕರ್ ಗಳು ಡ್ರಗ್ ನ್ನು ಬುಕ್ ಮಾಡ್ತಾರೆ. ಯಾರದ್ದೋ ಹೆಸರಿನ ವಿಳಾಸ ನೀಡುತ್ತಾರೆ. ಹೀಗಾಗಿ ವಿದೇಶಿ ಪಾರ್ಸೆಲ್ ಹೆಸರಿನಲ್ಲಿ ಸಂಬಂಧ ಪಟ್ಟ ರಾಜ್ಯ, ದೇಶಗಳ ವಿದೇಶಿ ಅಂಚೆ ಕಚೇರಿಗಳಿಗೆ ತಲುಪುತ್ತವೆ. ಇನ್ನು ಅವರನ್ನು ಯಾರ ಹೆಸರಿನಲ್ಲಿ ಬಕ್ ಮಾಡಲಾಗಿರುತ್ತೋ ಅದೇ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಸಲಿ ಪೆಡ್ಲರ್ ಗಳು ವಿದೇಶಿ ಅಂಚೆ ಕಚೇರಿಗಳಲ್ಲಿ ತೆಗೆದುಕೊಂಡು ಹೋಗಲು ಬರುತ್ತಾರೆ.
ಸೀಮಾಸುಂಕ ಅಧಿಕಾರಿಗಳು ಎಚ್ಚತ್ತದರೆ ಪಾರ್ಸೆಲ್ ನೆಪದಲ್ಲಿ ಡ್ರಗ್ ತರಿಸಿರುವುರು ಸಿಕ್ಕಿ ಬೀಳುತ್ತಾರ. ಇಲ್ಲದಿದ್ದರೆ ತಪ್ಪಿಸಿಕೊಳ್ಳುತ್ತಾರೆ. ಇನ್ನು ಭ್ರಷ್ಟಾಚಾರ, ಮಾಮೂಲಿ ಎಂಬ ವಿಚಾರ ಬಂದರೆ ಡ್ರಗ್ ಜಾಲ ಎಲ್ಲವನ್ನು ಖರೀಸುವ ಶಕ್ತಿ ಇದೆ. ಹೀಗಾಗಿ ಸರಾಗವಾಗಿ ಸಿಂಥೆಟಿಕ್ ಡ್ರಗ್ ಪಾರ್ಸೆಲ್ ಹೆಸರಿನಲ್ಲಿ ಪೂರೈಕೆಯಾಗುತ್ತದೆ. ಇದೇ ರೀತಿ ಡಾರ್ಕ್ ವೆಬ್ ತಾಣದಲ್ಲಿ ಬುಕ್ ಮಾಡಿದ ಡ್ರಗ್ ಯಾರದ್ದೋ ಹೆಸರಿನಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಬರುತ್ತದೆ. ಈ ಪಾರ್ಸೆಲ್ ಗಳ ಜಾಡು ಹಿಡಿದೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ ಪಡ್ಲರ್ ಗಳನ್ನು ಬಂಧಿಸುತ್ತಾರೆ.












Click it and Unblock the Notifications