ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾಗೆ ಜಾಮೀನು ಮಂಜೂರು
ಬೆಂಗಳೂರು, ಡಿ. 11: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
85 ದಿನಗಳ ಕಾಲದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗಲ್ರಾನಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಅನಾರೋಗ್ಯದ ಕಾರಣ ನೀಡಿ ಸಂಜನಾ ಅರ್ಜಿ ಸಲ್ಲಿಸಿದ್ದರು. ಹೆಚ್ಚಿನ ವೈದ್ಯಕೀಯ ನೆರವು ಅಗತ್ಯವಿರುವುದರಿಂದ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ನಟಿ ಸಂಜನಾ ಅವರ ಆರೋಗ್ಯ ತಪಾಸಣೆಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆಸಿ, ತಪಾಸಣೆ ವರದಿಯನ್ನು ಡಿ. 10 ರೊಳಗೆ ಸಲ್ಲಿಸಲು ಸೂಚಿಸಿತ್ತು.

ವೈದ್ಯಕೀಯ ವರದಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. 3,00,000 ರು ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ನೀಡಲು ಸೂಚಿಸಲಾಗಿದೆ. ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಹಾಗೂ ವಿಚಾರಣೆಗೆ ಸಹಕರಿಸಬೇಕು, ಪಾಸ್ ಪೋರ್ಟ್ ಪೊಲೀಸರ ವಶಕ್ಕೆ ನೀಡಬೇಕು, ಜಾಮೀನು ಅವಧಿಯಲ್ಲಿ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಲಾಗಿದೆ.
ಡ್ರಗ್ ಪೆಡ್ಲರ್ಸ್ ಜೊತೆ ಸಂಪರ್ಕ, ವಾಟ್ಸಪ್ ಸಂಭಾಷಣೆ ಆಧಾರದ ಮೇಲೆ ಸಂಜನಾರನ್ನು ಪೊಲೀಸರು ಬಂಧಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ರಾಗಿಣಿ ದ್ವಿವೇದಿ ಸದ್ಯ ಜೈಲಿನಲ್ಲಿದ್ದಾರೆ.












Click it and Unblock the Notifications