Namma Metro; ಹಳದಿ ಮಾರ್ಗ ಅಪ್‌ಡೇಟ್, ಟೆಕ್ಕಿಗಳಿಗೆ ಮತ್ತೆ ನಿರಾಸೆ
ಬೆಂಗಳೂರು, ಜನವರಿ 08: ಬೆಂಗಳೂರು ನಗರದಲ್ಲಿ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಈ ಮಾರ್ಗದಲ್ಲಿ ಸಂಚಾರ ಆರಂಭವಾಗುವುದು ಇನ್ನೂ ವಿಳಂಬವಾಗಲಿದೆ. ಆದ್ದರಿಂದ ಟೆಕ್ಕಿಗಳಿಗೆ ನಿರಾಸೆಯಾಗಿದೆ.
ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲನ್ನು ಓಡಿಸಲಿದೆ. ಆದರೆ ಈ ಬೋಗಿಗಳು ಬೆಂಗಳೂರಿಗೆ ಬರುವುದು ತಡವಾಗುವ ಕಾರಣ ಮೆಟ್ರೋ ರೈಲು ಸಂಚಾರ ಇನ್ನೂ ಆರು ತಿಂಗಳು ತಡವಾಗಲಿದೆ.

2024ರ ಫೆಬ್ರವರಿಯಲ್ಲಿ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ)ದಲ್ಲಿ ರೈಲು ಸಂಚಾರ ಮಾಡುತ್ತೇವೆ ಎಂದು ಬಿಎಂಆರ್‌ಸಿಎಲ್ ಹೇಳಿತ್ತು. ಮಾರ್ಗದ ಸಿವಿಲ್ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲು ಸಹ ಇನ್ನೂ ಬೋಗಿಗಳು ಬಂದಿಲ್ಲ.
ಬೋಗಿಗಳು ಬರಲು ಅನುಮತಿ ಸಿಕ್ಕಿಲ್ಲ; ಚೀನಾದಿಂದ ಸಿಬ್ಬಂದಿಗಳು ಆಗಮಿಸಲು ಭಾರತ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಚಾಲಕ ರಹಿತ ಬೋಗಿಗಳು ಭಾರತಕ್ಕೆ ಬರಲು ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಹಡಗಿನ ಮೂಲಕ ಬೋಗಿಗಳು ಚೆನ್ನೈಗೆ ಬರಬೇಕು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಬೇಕಿದೆ.
ಚೆನ್ನೈನಿಂದ ಹೆಬ್ಬಗೋಡಿ ನಿಲ್ದಾಣಕ್ಕೆ ಬೋಗಿಗಳು ಬರಲಿವೆ. ಬೋಗಿಗಳು ಬಂದ ಬಳಿಕ ಸುಮಾರು 2 ತಿಂಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಬೇಕಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕು. ಆದ್ದರಿಂದ ಸುಮಾರು 6 ತಿಂಗಳ ಕಾಲ ರೈಲು ಸಂಚಾರ ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.
ಚೀನಾದ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಟೆಂಡರ್‌ನಲ್ಲಿನ ನಿಯಮದಂತೆ ಬೋಗಿಗಳನ್ನು ಪಶ್ಚಿಮ ಬಂಗಾಳದ ತೀತಾಘರ್ ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡುತ್ತಿದೆ. ಆದರೆ ಈ ಬೋಗಿಗಳು ಸಹ ತಲುಪುವುದು ತಡವಾಗಲಿದೆ.
ಬಿಎಂಆರ್‌ಸಿಎಲ್ ಪಿಆರ್‌ಒ ಯಶವಂತ ಚೌಹಣ್ ಅವರ ಪ್ರಕಾರ ಹಲವು ಹಂತಗಳಲ್ಲಿ ಮೂರು ತಿಂಗಳು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರ, ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಪೂರ್ಣಗೊಳ್ಳಲು ಜೂನ್-ಜುಲೈ ತಿಂಗಳು ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
2019ರಲ್ಲಿಯೇ ನಮ್ಮ ಮೆಟ್ರೋ ಚೀನಾದ ಕಂಪನಿ ಜೊತೆ ಬೋಗಿಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಆಗ ನಿಯಮದಂತೆ 173 ವಾರಗಳಲ್ಲಿ 216 ಬೋಗಿ ಪೂರೈಸಬೇಕಿತ್ತು. ಕೋವಿಡ್ ಹಾಗೂ ವಿದೇಶಿ ನೇರ ಹೂಡಿಕೆ, ವ್ಯಾಪಾರ ನಿರ್ಬಂಧ ಮುಂತಾದ ಕಾರಣಗಳಿಂದಾಗಿ ಬೋಗಿ ಪೂರೈಕೆ ವಿಳಂಬವಾಗಿದೆ.
ಮೊದಲು ಬಿಎಂಆರ್‌ಸಿಎಲ್ ಹಳದಿ ಮಾರ್ಗದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರವನ್ನು 2021ರಲ್ಲಿ ಆರಂಭಿಸುತ್ತೇವೆ ಎಂದು ಹೇಳಿತ್ತು. ಆದರೆ ವಿವಿಧ ಕಾರಣಗಳಿಂದ ರೈಲು ಸಂಚಾರ ವಿಂಳಬವಾಗುತ್ತಲೇ ಬಂದಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ಟೆಕ್ಕಿಗಳಿಗೆ ನಿರಾಸೆಯಾಗಿದೆ.
ಈ ಮಾರ್ಗದ ಎಲ್ಲಾ 14 ನಿಲ್ದಾಣಗಳ ಚಾವಣಿಗಳು ಹಳದಿ ಬಣ್ಣದಿಂದ ಕೂಡಿವೆ. ಇನ್ಫೋಸಿಸ್ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿ ಎಂದು ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕಾದು ಕುಳಿತಿದ್ದಾರೆ.
ಹಳದಿ ಮಾರ್ಗದಲ್ಲಿ ಆರ್. ವಿ. ರಸ್ತೆ, ಬಿಟಿಎಂ ಬಡಾವಣೆ, ಸಿಲ್ಕ್ ಬೋರ್ಡ್, ಎಚ್‌ಎಸ್ಆರ್ ಬಡಾವಣೆ, ಆಕ್ಸ್‌ಫರ್ಡ್ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಹೊಸ ರೋಡ್, ಎಲೆಕ್ಟ್ರಾನಿಕ್ ಸಿಟಿ-1, ಎಲೆಕ್ಟ್ರಾನಿಕ್ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ನಿಲ್ದಾಣಗಳಿವೆ.












Click it and Unblock the Notifications