ಸಚಿವ ಮುನಿರತ್ನ ಆಸ್ತಿ ₹293 ಕೋಟಿ: ಭಾಸ್ಕರ್ ರಾವ್ ಆಸ್ತಿ ಎಷ್ಟು?
ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಟಿಕೆಟ್ ಪಡೆದ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಜೊತೆಗೆ ಅಭ್ಯರ್ಥಿಗಳ ಆಸ್ತಿ ವಿವರ ಕೂಡ ಬಹಿರಂಗವಾಗುತ್ತಿದೆ. ಇದೀಗ ಸಚಿವ ಮುನಿರತ್ನ (Muniratna) ಅವರ ಆಸ್ತಿ ವಿವರ ಬಹಿರಂಗವಾಗಿದ್ದು, ಆರ್.ಆರ್. ನಗರ (RR Nagar) ಚುನಾವಣಾ ಅಖಾಡ ರಂಗೇರಿದೆ.
ತೋಟಗಾರಿಕಾ ಸಚಿವ ಮುನಿರತ್ನ ಕುಟುಂಬದ ಆಸ್ತಿ ಮೌಲ್ಯ ಒಟ್ಟು ₹293 ಕೋಟಿ ಆಗಿದೆ. 60 ಕಡೆ ಕೃಷಿ ಜಮೀನು, 25 ಕಡೆ ಕೃಷಿಯೇತರ ಜಾಗ, 2 ಕಮರ್ಷಿಯಲ್ ಬಿಲ್ಡಿಂಗ್, 6 ವಸತಿ ಕಟ್ಟಡಗಳನ್ನ ಮುನಿರತ್ನ ಅವರ ಕುಟುಂಬ ಹೊಂದಿದೆ. ಇನ್ನು ಐಷಾರಾಮಿ ಕಾರು, ಟಿಪ್ಪರ್‌ಗಳು ಸೇರಿ 30 ವಾಹನಗಳು ತಮ್ಮ ಬಳಿ ಇವೆ ಎಂದು ಮುನಿರತ್ನ ಘೋಷಿಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿನ್ನೆ ಸಚಿವ ಮುನಿರತ್ನ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಸಚಿವ ಮುನಿರತ್ನ ಆಸ್ತಿ ವಿವರ
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿವರಿಸಿರುವಂತೆ, ಸ್ವತಃ ಮುನಿರತ್ನ ಹೆಸರಲ್ಲಿ ₹31.34 ಕೋಟಿ ಮೌಲ್ಯದ ಚರಾಸ್ತಿ, ₹239.29 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹93.48 ಕೋಟಿ ಸಾಲ ಇದೆ ಎಂದು ಮಾಹಿತಿ ನೀಡಲಾಗಿದೆ. ಜೊತೆಗೆ ಮುನಿರತ್ನ ಅವರ ಪತ್ನಿ ಹೆಸರಲ್ಲಿ ₹1.66 ಕೋಟಿ ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು ₹21.29 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆಯಂತೆ. ಹಾಗೇ ₹8.73 ಕೋಟಿ ಸಾಲ ಕೂಡ ಇರುವುದಾಗಿ ಮಾಹಿತಿ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ 2ನೇ ಚುನಾವಣೆ
2020ರ ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರ್.ಆರ್. ನಗರದಿಂದ ಕಣಕ್ಕಿಳಿದಿದ್ದರು ಸಚಿವ ಮುನಿರತ್ನ. ಬಳಿಕ ಈಗ ಮತ್ತೊಮ್ಮೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕರಾಗಿ ಇದೇ ಕ್ಷೇತ್ರದಿಂದ ಮುನಿರತ್ನ ಆಯ್ಕೆಯಾಗುತ್ತಿದ್ದರು. ಮುನಿರತ್ನ ಎದುರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕಣಕ್ಕೆ ಇಳಿದಿದ್ದಾರೆ. ಉಪಚುನಾವಣೆಯಲ್ಲೂ ಸಚಿವ ಮುನಿರತ್ನ ವಿರುದ್ಧ ಕುಸುಮಾ ಸ್ಪರ್ಧಿಸಿದ್ದರು.
ಭಾಸ್ಕರ್ ರಾವ್ ಆಸ್ತಿ ಎಷ್ಟು?
ಇನ್ನು ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚಾಮರಾಜಪೇಟೆಯ ಬಿಜೆಪಿ ಟಿಕೆಟ್ ಭಾಸ್ಕರ್ ರಾವ್ ಅವರಿಗೆ ಸಿಕ್ಕಿತ್ತು. ಈ ಮೂಲಕ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಖಾಡ ಪ್ರವೇಶ ಮಾಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅವರು, ತಮ್ಮ ಆಸ್ತಿ ವಿವರವನ್ನೂ ಘೋಷಿಸಿದ್ದಾರೆ. ಭಾಸ್ಕರ್‌ರಾವ್ ಅವರ ಒಟ್ಟು ಆಸ್ತಿ ₹ 23.92 ಕೋಟಿಯಾಗಿದೆ.

ಹೌದು, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಒಟ್ಟು ಆಸ್ತಿ ಮೌಲ್ಯ ₹ 23.92 ಕೋಟಿಯಾಗಿದ್ದರೂ ಅವರ ಬಳಿ ₹2.81 ಕೋಟಿಯ ಚರಾಸ್ತಿ ಹಾಗೂ ₹4.75 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಆದರೆ ಪತ್ನಿ ಡಾ.ಚಂದ್ರಿಕಾರಾವ್ ಅವರು ₹ 2.38 ಕೋಟಿ ಚರಾಸ್ತಿ, ₹ 13.99 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ₹ 35.48 ಲಕ್ಷ ಮೌಲ್ಯದ ಮೂರು ಕಾರು, ಒಂದು ಸ್ಕೂಟಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಪತ್ನಿಯ ಬಳಿ ₹ 37.50 ಲಕ್ಷದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣ ಇದೆ.
ಒಟ್ನಲ್ಲಿ ಕರ್ನಾಟಕದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಆಸ್ತಿ ಲೆಕ್ಕ ಕೂಡ ಗಮನ ಸೆಳೆಯುತ್ತಿದೆ. ಕೋಟಿ ಕುಬೇರರು ಅದೃಷ್ಟ ಪರೀಕ್ಷೆಗೆ ಅಖಾಡ ಪ್ರವೇಶ ಮಾಡಿದ್ದು, ಮತದಾರ ಪ್ರಭುವಿನ ಕೃಪೆ ಕೋಟಿ ಕುಳಗಳಿಗೆ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications