ಹೊಸ ವರ್ಷಾಚರಣೆ ಬೆಂಗಳೂರಿನಲ್ಲಿ ಬಂದೋಬಸ್ತ್
ಬೆಂಗಳೂರು, ಡಿ. 30 : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅದರಲ್ಲಿಯೂ ನಗರದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕಮಲ್ ಪಂತ್ ಮುಂಜಾಗ್ರತಾ ಕ್ರಮವಾಗಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ 50ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ರಾತ್ರಿ 1ಗಂಟೆ ವರೆಗೆ ಮಾತ್ರ ಹೋಟೆಲ್, ರೆಸ್ಟೋರೆಂಟ್, ಪಬ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿ ಎಂದು ಅವರು ತಿಳಿಸಿದರು.

ನಗರದಲ್ಲಿ ಭದ್ರತೆಗಾಗಿ 700ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 26 ಕೆ.ಎಸ್.ಆರ್.ಪಿ, 12 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. 30ಕ್ಕೂ ಹೆಚ್ಚು ವಾಚ್ ಟವರ್ ಗಳನ್ನು ನಿರ್ಮಿಸಲಾಗಿದೆ. ನಗರದಾದ್ಯಂತ ಡಿ.31ರ ರಾತ್ರಿ ಪೊಲೀಸರು ಗಸ್ತು ತಿರುಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಭ್ರಮಾಚರಣೆ ನೆಪದಲ್ಲಿ ವೀಲಿಂಗ್, ಡ್ರ್ಯಾಗ್, ರೇಸ್ ಗಳನ್ನು ನಿಷೇಧಿಸಲಾಗಿದೆ. ಹೊಸ ವರ್ಷದ ಹುಮ್ಮಸ್ಸಿನಲ್ಲಿ ಕುಡಿದು, ಮೋಜು ಮಸ್ತಿ ನಡೆಸಿ ಪ್ರಾಣಕ್ಕೆ ಹಾನಿ ತಂದುಕೊಳ್ಳಬೇಡಿ ಎಂದು ಕಮಲ್ ಪಂತ್ ಮನವಿ ಮಾಡಿದ್ದಾರೆ. ಪೊಲೀಸರು ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸಿ ಸಹಕರಿಸುವಂತೆಯೂ ಅವರು ಕೋರಿದ್ದಾರೆ. [ಸಂಭ್ರಮಕ್ಕೆ ಮತ್ತೇರಿಸುವ ಸುದ್ದಿ]
ಸಂಚಾರ ಬದಲು : ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಚರ್ಚ್ ಸ್ಟ್ರೀಟ್ ಸುತ್ತ ವಾಹನ ಓಡಾಟ ಮತ್ತು ನಿಲುಗಡೆಗೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸ್ಟಂಟ್, ಡ್ರ್ಯಾಗ್ ರೇಸ್ ವೀಲ್ಹಿಂಗ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. [ಸಂಚಾರ ಬದಲಾವಣೆಗಳು]












Click it and Unblock the Notifications