ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್
Recommended Video

ಬೆಂಗಳೂರು, ಮಾರ್ಚ್ 06: ಲಾಂಗು ಮಚ್ಚು ತೋರಿಸಿ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ನಗರದ ಹೊರವಲಯದ ಮಾಚೋಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಲೆಗೆ ಹೆಲ್ಮೆಟ್ ಧರಿಸಿ ಕೈಯಲ್ಲಿ ಲಾಂಗುಗಳನ್ನು ಹಿಡಿದ ಮೂವರು ಮಾಚೋಹಳ್ಳಿಯ ಕ್ರಾಸ್‌ನಲ್ಲಿರುವ ಅಂಬೆ ಜ್ಯುಯೆಲರ್ಸ್‌ಗೆ ಪ್ರವೇಶಿಸಿ, ಅಂಗಡಿಯಲ್ಲಿ ಇದ್ದ ಇಬ್ಬರು ಗ್ರಾಹಕರನ್ನು ಹೆದರಿಸಿದ್ದಾರೆ. ದರೋಡೆಗೆ ಪ್ರತಿರೋಧ ತೋರಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿರುವ ಚಿನ್ನಾಭರಣ ದೋಚಿದ್ದಾರೆ.
ನಿನ್ನೆ ರಾತ್ರಿ 8.15ರ ಸುಮಾರಿಗೆ ದರೋಡೆ ನಡೆದಿದ್ದು 5 ಬೈಕ್‌ಗಳಲ್ಲಿ ಬಂದ 9 ಜನ ದರೋಡೆ ಮಾಡಿದ್ದಾರೆ. 6 ಜನ ಅಂಗಡಿಯ ಹೊರಗೆ ನಿಂತರೆ ಮೂವರು ಅಂಗಡಿ ಒಳಗೆ ಬಂದು ಕೈಗೆ ಸಿಕ್ಕಿದ ಆಭರಣಗಳನ್ನು ಬ್ಯಾಗ್‌ಗೆ ತುಂಬಿಸಿಕೊಂಡು ಪೇರಿ ಕಿತ್ತಿದ್ದಾರೆ.

ಅಂಗಡಿ ಮಾಲೀಕ ಚಂದಾರಾಮ್ ಅಲ್ಪ ಪ್ರತಿರೋಧ ತೋರಿದರಾದರೂ ಆತನಿಗೂ ಮಚ್ಚಿನಿಂದ ಹಲ್ಲೆ ಮಾಡಿ ಹೆದರಿಸಿದ್ದಾರೆ. ಆತನಿಗೆ ಕೈಗೆ ಗಾಯವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದರೋಡೆ ನಡೆಸಿ ಪರಾರಿ ಆಗಬೇಕಾದರೆ ಸಾರ್ವಜನಿಕರು ಬೆನ್ನತ್ತಿ ಒಬ್ಬ ದರೋಡೆಕೋರನನ್ನು ಹಿಡಿದಿದ್ದಾರೆ. ಆತನ ಹೆಸರು ರಾಮು ಎನ್ನಲಾಗಿದ್ದು ಆತನ ಸಹಚರರ ಬಗ್ಗೆ ವಿಚಾರಣೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications