ಬೆಂಗಳೂರಿನಲ್ಲಿ ಹಾಡುಹಗಲೇ 10 ಕೆ.ಜಿ.ಚಿನ್ನ ದರೋಡೆ

ರಾಜರಾಜೇಶ್ವರಿನಗರದ ಬೆಮೆಲ್ ಲೇಔಟ್‌ನಲ್ಲಿರುವ ಬೆಮೆಲ್ ಕಾಂಪ್ಲೆಕ್ಸ್‌ನಲ್ಲಿನ ಇಂಡಿಯನ್ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್ (ಐಐಎಫ್ಎಲ್) ಶಾಖೆಯಲ್ಲಿ ಈ ದರೋಡೆ ನಡೆದಿದೆ. ಶುಕ್ರವಾರ ಮಧ್ಯಾಹ್ನದ ಊಟದ ಸಮಯದಲ್ಲಿ ಹೆಚ್ಚಿನ ಗ್ರಾಹಕರು ಇಲ್ಲದಿರುವಾಗ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.
ಕಚೇರಿಗೆ ಬಂದೂಕು ಮತ್ತು ಮಾರಾಕಾಸ್ತ್ರಗಳೊಂದಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು, ಶಾಖೆಯ ವ್ಯವಸ್ಥಾಪಕಿ ಭಾಮಿನಿ ಬಳಿ ಚಿನ್ನಾಭರಣ ಇಟ್ಟಿರುವ ಲಾಕರ್ ಕೀ ನೀಡುವಂತೆ ಬೆದರಿಸಿದ್ದಾರೆ. ಆದರೆ, ಅವರು ಹೆದರಲಿಲ್ಲ.
ತಕ್ಷಣ ಅವರ ಕುತ್ತಿಗೆಗೆ ಡ್ರ್ಯಾಗರ್ ಚುಚ್ಚಿದ್ದಾರೆ. ಇದರಿಂದ ಹೆದರಿದ ಅವರು ಕೀ ನೀಡಿದ್ದಾರೆ. ಕೂಡಲೇ ಗ್ರಾಹಕರು ಅಡವಿಟ್ಟಿದ್ದ 10 ಕೆಜಿ ಚಿನ್ನಾಭರಣ ಮತ್ತು ಕ್ಯಾಶ್ ಕೌಂಟರ್ ನಲ್ಲಿದ್ದ ಆರು ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ ಎಂದು ರಾಜರಾಜೇಶ್ವರಿ ನಗರ ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್, ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಪ್ರಣವ್ ಮೊಹಂತಿ, ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಐವರಿದ್ದರು : ದರೋಡೆ ನಡೆಯುವ ಸಂದರ್ಭದಲ್ಲಿ ಐಐಎಫ್ಎಲ್ ಕಚೇರಿಯಲ್ಲಿ ಶಾಖಾ ವ್ಯವಸ್ಥಾಪಕಿ ಸೇರಿದಂತೆ ಐವರು ಮಾತ್ರ ಇದ್ದರು. ಓರ್ವ ಭದ್ರತಾ ಸಿಬ್ಬಂದಿ ಸಹ ಅಸಹಾಯಕನಾಗಿದ್ದ.
ದರೋಡೆಕೋರರ ಕೃತ್ಯ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಬೈಕ್ ನಲ್ಲಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.












Click it and Unblock the Notifications