Pavithra Gowda Custody: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಬಳಿಕ ಪವಿತ್ರಾ ಗೌಡ ವಶಕ್ಕೆ
ಬೆಂಗಳೂರು ಜೂನ್ 11: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಆರ್‌ಆರ್ ನಗರ ಪೊಲೀಸರು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಅವರನ್ನು ಸದ್ಯ ಕರೆತರಲಾಗುತ್ತಿದೆ.
ರೇಣುಕಾಸ್ವಾಮಿ ಅವರ ಶವ ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಜೂನ್ 8ರಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎನ್ನುವುದು ದೃಢವಾಗಿತ್ತು. ರೇಣುಕಾಸ್ವಾಮಿ ನಟ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಹೀಗಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಕೊಲೆಗೆ ದರ್ಶನ್ ಸೂಚನೆ ಕಾರಣ ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎನ್ನುವ ಕಾರಣಕ್ಕೆ ದರ್ಶನ್ ಕೋಪಗೊಂಡು ಹುಡುಗರನ್ನು ಕಳುಹಿಸಿ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು ಅವರಿಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಹೀಗಾಗಿ ಕಾಮಾಕ್ಷಿಪಾಳ್ಯದ ಶೆಡ್ಡಿಗೆ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ವೇಳೆ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿದೆ. ಜೂನ್8ರಂದು ಶವ ಪತ್ತೆಯಾಗಿದೆ.
ದರ್ಶನ್ ಫ್ಯಾನ್ ಆಗಿದ್ದ ರೇಣುಕಾಸ್ವಾಮಿ
ಮಾಹಿತಿ ಪ್ರಕಾರ ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅವರ ಬಹು ದೊಡ್ಡ ಫ್ಯಾನ್ ಎನ್ನಲಾಗುತ್ತಿದೆ. ದರ್ಶನ್ ಕುಟುಂಬ ಹಾಳಾಗದೇ ಇರಲು ರೇಣುಕಾಸ್ವಾಮಿ ಬಯಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಪವಿತ್ರ ಗೌಡ ಅವರಿಗೆ ಅಶ್ಲೀಲ್ ಮೆಸೇಜ್ ಹಾಗೂ ವಿಡಿಯೋಗಳನ್ನು ರೇಣುಕಾಸ್ವಾಮಿ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ.












Click it and Unblock the Notifications