Rent in Bengaluru: ಜಿಎಸ್‌ಟಿ ಹೊರೆ- ಪಿಜಿ ಬಾಡಿಗೆ ಹೆಚ್ಚಿಸಲು ಮಾಲೀಕರ ನಿರ್ಧಾರ, ಎಷ್ಟು ಸಾವಿರ ಏರಿಕೆ? ಅಂಕಿಅಂಶ, ಮಾಹಿತಿ
ಬೆಂಗಳೂರು, ಆಗಸ್ಟ್ 07: ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಹಾಗೂ ಹಾಸ್ಟೆಲ್‌ಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಈ ಕಾರಣ ಪಿಜಿ ಹಾಗೂ ಹಾಸ್ಟೆಲ್‌ಗಳ ಬಾಡಿಗೆ ಹೆಚ್ಚು ಮಾಡುವುದಾಗಿ ಪಿಜಿ ಹಾಗೂ ಹಾಸ್ಟೆಲ್ ಓನರ್‌ಗಳು ಹೇಳಿದ್ದಾರೆ. ಇದು ಬೆಂಗಳೂರಿನಲ್ಲಿ ವಾಸಿಸುವ ಬ್ಯಾಚುಲರ್‌ಗಳನ್ನು ಸಂಕಷ್ಟಕ್ಕೆ ದೂಡಿದೆ. 'ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿರುವ ಈ ವರದಿ ಓದಿ.
ಈಗಿರುವ ಜಿಎಸ್‌ಟಿ ನಿಯಮಗಳ ಅಡಿಯಲ್ಲಿ ಪೇಯಿಂಗ್ ಗೆಸ್ಟ್ ಹಾಗೂ ಹಾಸ್ಟೆಲ್‌ಗಳನ್ನು ವಸತಿ ನೆಲೆಗಳಲ್ಲವೆಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಈ ವಿಚಾರವಾಗಿ 'ಟೈಮ್ಸ್ ಆಫ್ ಇಂಡಿಯಾ'ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಸಂಪತ್ ಆಲ್ತೂರ್, 'ನಗರದಲ್ಲಿ ಸರಾಸರಿ 20 ರಿಂದ 30 ಕೊಠಡಿಗಳಿರುವ ಪಿಜಿಗಳಿವೆ. ಅಂತಹ ಜಾಗಕ್ಕೆ ಪಿಜಿ ಮಾಲೀಕರು ಬಿಲ್ಡಿಂಗ್ ಓನರ್‌ಗಳಿಗೆ ಪಾವತಿಸುವ ಬಾಡಿಗೆ ತಿಂಗಳಿಗೆ 2ರಿಂದ 4 ಲಕ್ಷ ರೂಪಾಯಿ ವರೆಗೆ ಬದಲಾಗುತ್ತದೆ. ಜಿಎಸ್‌ಟಿಯನ್ನು ಮಾಲೀಕರು ಪಾವತಿಸಬೇಕಿರುವ ಅನಿವಾರ್ಯತೆ ಬಂದಿರುವುದರಿಂದ ಪಿಜಿ ಬಾಡಿಗೆಯನ್ನು ಹೆಚ್ಚಿಸಲೇಬೇಕಿದೆ' ಎಂದು ತಿಳಿಸಿದ್ದಾರೆ.
ಈಗ ನಿರ್ಧರಿಸಿದಂತೆ ಪಿಜಿ ಹಾಗೂ ಹಾಸ್ಟೆಲ್ ಬಾಡಿಗೆಗಳು ಶೇ 10ರಿಂದ 12ರ ವರೆಗೆ ಏರಿಕೆ ಆಗಲಿದೆ. ಇದರಿಂದ ಗ್ರಾಹಕರಿಗೆ ಕನಿಷ್ಠ 1,000 ರೂ.ಗಳಷ್ಟು ದುಬಾರಿಯಾಗಲಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುಮಾರು 20,000 ಪಿಜಿಗಳು ಇರಬಹುದು. ಅವುಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಕಡಿಮೆ ವೆಚ್ಚದ ಪಿಜಿಗಳಿವೆ. ಇವುಗಳನ್ನು ಶ್ರೀಮಂತರಲ್ಲದ ಸ್ಥಳೀಯರು ನಡೆಸುತ್ತಾರೆ. ಹೆಚ್ಚಿನವರು ಸಣ್ಣ-ಪ್ರಮಾಣದ ಪಿಜಿ ಮಾಲೀಕರಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲವೇ ಕೆಲವು ವೃತ್ತಿಪರ ಮತ್ತು ದುಬಾರಿ ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಿಎಸ್‌ಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ತಮ್ಮ ಸಂಘವು ಯೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಮಗೆ ಇನ್ನೂ ಅಸ್ಪಷ್ಟತೆ ಇದೆ. ಏಕೆಂದರೆ, ಇದೇ ನೀತಿಯ ಅಡಿಯಲ್ಲಿ ವ್ಯಾಪಾರದ ವಹಿವಾಟು ವರ್ಷಕ್ಕೆ 20 ಲಕ್ಷಕ್ಕಿಂತ ಕಡಿಮೆಯಿದ್ದರೆ, ಅದಕ್ಕೆ ತೆರಿಗೆಯಿಂದ ವಿನಾಯಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಪಿಜಿಗಳಿಗೆ ಈಗ ತೆರಿಗೆ ಏಕೆ?
ಪಿಜಿ ಹಾಗೂ ಹಾಸ್ಟೆಲ್ ಉದ್ಯಮವನ್ನು ಹೋಟೆಲ್ ಉದ್ಯಮಕ್ಕೆ ಸಮನಾಗಿ ನೋಡಲಾಗುತ್ತಿದೆ. ಆದ್ದರಿಂದ, ಅದರ ಗಳಿಕೆಯ ಮೇಲೆ ಜಿಎಸ್‌ಟಿ ಪಾವತಿಸಬೇಕೆಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ. ಪಿಜಿಗಳಿಗೆ ವಸತಿ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಳ್ಳಲಾಗುತ್ತದೆ. ಹಾಸಿಕೆ ಹಾಗೂ ಊಟದ ಸೌಲಭ್ಯಗಳನ್ನು ಪಿಜಿ ಹಾಗೂ ಹಾಸ್ಟೆಲ್‌ಗಳು ನೀಡುತ್ತವೆ. ಒಂದು ಕೋಣೆಯಲ್ಲಿ ಇಬ್ಬರು ಅಥವಾ ಮೂವರನ್ನು ಇರಿಸಲಾಗುತ್ತದೆ. ಇದೆಲ್ಲವೂ ಶಾಶ್ವತ ನೆಲೆಗಳ ಲಕ್ಷಣಗಳಲ್ಲ ಎಂದು ಜಿಎಸ್‌ಟಿ ಪ್ರಾಧಿಕಾರ ತಿಳಿಸಿದೆ.
ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಒದಗಿಸಲಾಗುವ ಆಹಾರ, ವಾಷಿಂಗ್ ಮೆಷಿನ್ ಮತ್ತು ಇತರ ಸೇವೆಗಳ ಮೇಲೆ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ ಎಂದು ಪ್ರಾಧಿಕಾರವು ತೀರ್ಪು ಹೇಳಿದೆ.

ಈ ವಿಚಾರವಾಗಿ ಮಾತನಾಡಿರುವ ಸೆರಿನಿಟಿ ಹಾಸ್ಟೆಲ್‌ಗಳ ಸಿಇಒ ಮೆಲ್ಬಿನ್ ಮ್ಯಾಥ್ಯೂ ಅವರು, 'ಹಾಸ್ಟೆಲ್‌ನಲ್ಲಿ ಒದಗಿಸಲಾದ ಆಹಾರದ ಮೇಲೆ ಶೇ 5 ಜಿಎಸ್‌ಟಿ ವಿಧಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಆಹಾರದ ಮೇಲಿನ ಈ ಶೇ 5 ಜಿಎಸ್‌ಟಿಯನ್ನು ಹೇಗೆ ಕ್ಲೈಮ್ ಮಾಡಬಹುದು ಎಂದು ಪೋಷಕರು ನಮ್ಮನ್ನು ಕೇಳುತ್ತಾರೆ. ಅವರಿಗೆ ಇದೆಲ್ಲವನ್ನೂ ವಿವರಿಸುವುದೇ ಕಷ್ಟಕರವಾಗಿದೆ' ಎಂದು ಮ್ಯಾಥ್ಯೂ ಹೇಳಿದ್ದಾರೆ.
'ನಾವು ನಗರದಾದ್ಯಂತ 15 ಹಾಸ್ಟೆಲ್‌ಗಳನ್ನು ಹೊಂದಿದ್ದೇವೆ. 2,000 ರಿಂದ 2,500 ಬಾಡಿಗೆದಾರರು ಈ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದಾರೆ. ಒಪ್ಪಂದಕ್ಕೆ ಸಹಿ ಮಾಡಿದ ನಂತರ ನಾವು ಬಾಡಿಗೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಸಾಂಕ್ರಾಮಿಕ ರೋಗದ ನಂತರ, ಜಿಎಸ್‌ಟಿ ಹೆಚ್ಚಳ ನಮ್ಮ ಉದ್ಯಮಕ್ಕೆ ಮತ್ತೊಂದು ಹೊಡೆತವಾಗಿದೆ ಎಂದು ಮ್ಯಾಥ್ಯೂ ತಿಳಿಸಿದ್ದಾರೆ.












Click it and Unblock the Notifications