ಸಿಎಂ ಲಕ್ಷ ವಸತಿ ಯೋಜನೆ: 3 ಮಹಡಿ ಅಲ್ಲ, 14 ಮಹಡಿಗಳ ಮನೆ ನಿರ್ಮಾಣ
ಬೆಂಗಳೂರು,ಆಗಸ್ಟ್ 27: ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಮತ್ತೊಂದು ತಿರುವು ಪಡೆದುಕೊಂಡಿದ್ದು,ಮೂರು ಅಂತಸ್ತಿನ ಕಟ್ಟಡ ಬದಲು 14ಮಹಡಿಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇದೂ ಕೂಡ ಒಂದಾಗಿದೆ.
ಈ ಮೊದಲು ಮೂರು ಮಹಡಿಗಳಲ್ಲಿ ಬರುವ 1936 ಮನೆಗಳ ನಿರ್ಮಾಣಕ್ಕೆ ಕರೆದ ಟೆಂಡರ್ ರದ್ದುಪಡಿಸಲಾಗಿದೆ. ಒಂದೊಮ್ಮೆ ಮೂರು ಮಹಡಿಯ ಕಟ್ಟಡ ನಿರ್ಮಿಸಿದರೆ ಉಳಿದುರುವ ಮನೆಗಳನ್ನು ನಿರ್ಮಿಸಲು ಮತ್ತೊಂದು ಜಾಗ ಹುಡುಕಬೇಕಾಗುತ್ತದೆ ಹಾಗಾಗಿ ಒಂದೇ ಜಾಗದಲ್ಲಿ 14 ಅಂತಸ್ತಿನ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮ ಒಂದೇ ಹಂತದಲ್ಲಿ ಜಾರಿ ಮಾಡಿದ ಯೋಜನೆಗಳಲ್ಲಿ 1936 ಮನೆಗಳನ್ನು ಜಿ+ ಕಟ್ಟಡದ ಮಾದರಿಯಲ್ಲಿ ನಿರ್ಮಿಸಲು 2018ರ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಿತ್ತು.

ನಗರ ಜಿಲ್ಲೆಯ 582.39 ಎಕರೆ ಜಾಗವನ್ನು ಉಚಿತವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ. ಕೆಲವೆಡೆ ಕಸದ ಘಟಕಗಳಿಗೆ ಹೊಂದಿಕೊಂಡಿರುವ ಜಾಗ, ಕ್ವಾರಿ ಇರುವುದು ಕಂಡುಬಂದಿದೆ. ಇಂತಹ ಜಾಗವನ್ನು ಮನೆಗಳನ್ನು ನಿರ್ಮಿಸಿದರೆ ಜನರು ಒಪ್ಪವುದಿಲ್ಲ. ಹೀಗಾಗಿ ಮನೆ ನಿರ್ಮಿಸಲು ಟೆಂಡರ್ ಕರೆಯುವ ಬದಲು ಜಾಗವು ವಸತಿ ಪ್ರದೇಶಕ್ಕೆ ಸೂಕ್ತವಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಲಾಗುತ್ತದೆ.
ಒಂದನೇ ಹಂತದಲ್ಲಿ ಅರ್ಜಿ ಕರೆದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 49,125 ಅರ್ಜಿಗಳು ಸಲ್ಲಿಕೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ 48,615 ಅರ್ಜಿದಾರರು ಮಾತ್ರ ಅರ್ಹರು ಎಂದು ತಿಳಿದುಬಂದಿದೆ,ಎರಡನೇ ಹಂತದಲ್ಲಿ ಇನ್ನುಳಿದ 51,385 ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.












Click it and Unblock the Notifications