ಕೋರ್ಟ್ ಮೆಟ್ಟಿಲೇರಿದ ರಮ್ಯಾ ತಂದೆ ವೆಂಕಟೇಶ ಬಾಬು
ಬೆಂಗಳೂರು, ಏ.11 : ಲೋಕಸಭೆ ಚುನಾವಣೆಗೆ ಐದು ದಿನಗಳು ಬಾಕಿ ಇರುವಂತೆಯೇ ರಮ್ಯಾ ಅವರಿಗೆ ಹೊಸ ಸವಾಲು ಎದುರಾಗಿದೆ. ರಮ್ಯಾ ನನ್ನ ಮಗಳು ಎಂದು ಹೇಳುವ ಬಿಸಿ ವೆಂಟಕೇಶ ಬಾಬು ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಾನು ರಮ್ಯಾ ತಂದೆ ಎಂದು ಕಾನೂನು ಪ್ರಕಾರ ಘೋಷಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಶುಕ್ರವಾರ ಬಿ.ಸಿ.ವೆಂಕಟೇಶ ಬಾಬು ಸಿಟಿ ಸಿವಿಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಮಂಡ್ಯ ಸಂಸದೆ ಮತ್ತು ನಟಿ ರಮ್ಯಾ ನನ್ನ ಮಗಳು. ಕಾನೂನಿನ ಪ್ರಕಾರ ರಮ್ಯಾ ತನ್ನ ಮಗಳು ಎಂದು ಘೋಷಿಸಬೇಕು ಎಂದು ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.

ರಮ್ಯಾ ನನ್ನನ್ನು ತಂದೆಯಂದು ಗುರುತಿಸಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿರುವ ವೆಂಕಟೇಶ ಬಾಬು, ರಮ್ಯಾ ತಾಯಿ ರಂಜಿತಾ ನನ್ನ ಪತ್ನಿ ಎಂದು ಅಗತ್ಯ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ರಮ್ಯಾ ನನ್ನ ಮಗಳು ಎಂದು ಘೋಷಿಸುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ.
ಜೂನ್ 22 1981 ರಂದು ನನ್ನ ಮತ್ತು ರಂಜಿತಾ ವಿವಾಹ ನಡೆಯಿತು. ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ರಮ್ಯಾ ನವೆಂಬರ್ 29, 1982ರಲ್ಲಿ ಜನಿಸಿದರು. ನಾನು ರಮ್ಯಾ ಅವರಿಗೆ ಹಲವಾರು ಬಾರಿ ತಂದೆ ಎಂದು ಒಪ್ಪಿಕೊಳ್ಳಿ ಎಂದು ಎಸ್ಎಂಎಸ್ ಮಾಡಿದ್ದೇನೆ. ಆದರೆ ರಮ್ಯಾ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ವೆಂಕಟೇಶ್ ಬಾಬು ಆರೋಪಿಸಿದ್ದಾರೆ. [ರಮ್ಯಾ ಪ್ರಚಾರದ ಚಿತ್ರಗಳನ್ನು ನೋಡಿ]
ರಮ್ಯಾ ನನ್ನನ್ನು ಅಪ್ಪಾ ಎಂದು ಕರೆಯಬೇಕು ಎಂದು ಹೇಳಿರುವ ವೆಂಕಟೇಶ ಬಾಬು, ಅಗತ್ಯ ಬಿದ್ದರೆ ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದು ಹೇಳಿದ್ದಾರೆ. ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ. ನನ್ನ ಮತ್ತು ರಮ್ಯಾ ಅವರನ್ನು ದೂರ ಮಾಡುತ್ತಿರುವವರು ಯಾರು ಎಂದು ತಿಳಿದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೊಮ್ಮೆ ರಮ್ಯಾ ಅವರ ತಾಯಿ ರಂಜಿತಾ ಅವರು ವೆಂಕಟೇಶ್ ಬಾಬುವನ್ನು 'ಬಾಸ್ಟರ್ಡ್' ಎಂದು ಕರೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಷ್ಟು ದಿನ ಸುಮ್ಮನಿದ್ದು ಚುನಾವಣೆ ಇನ್ನೇನು ಹತ್ತಿರದಲ್ಲಿ ಇರುವಾಗ ಈ ವಿಷಯವನ್ನು ಕೆದಕುತ್ತಿರುವುದರ ಔಚಿತ್ಯವೇನೆಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ, ರಮ್ಯಾ ಅವರು ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲವೆಂದು ಮಂಡ್ಯದಲ್ಲಿ ಬೆವರು ಸುರಿಸುತ್ತ, ಬಿಸ್ಲೇರಿ ನೀರು ಕುಡಿಯುತ್ತ, ಎಳನೀರು ಹೀರುತ್ತ ಪ್ರಚಾರದಲ್ಲಿ ತೊಡಗಿದ್ದಾರೆ.












Click it and Unblock the Notifications