Rameshwaram Cafe Blast Case: ಇಬ್ಬರು ಕಂಕಿತ ಆರೋಪಿಗಳು 10 ದಿನ ಎನ್‌ಐಎ ಕಸ್ಟಡಿಗೆ
ಬೆಂಗಳೂರು, ಏಪ್ರಿಲ್, 13: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಈ ಸಂಬಂಧ ನಿನ್ನೆ (ಏಪ್ರಿಲ್ 12) ಇಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ವಶಕ್ಕೆ ಪಡೆಯಲಾಗಿತ್ತು. ಇನ್ನು ಇಂದು (ಏಪ್ರಿಲ್ 13) ಬಂಧನಕ್ಕೊಳಗಾದ ಇಬ್ಬರು ಆರೋಪಿಗಳನ್ನು ಎನ್‍ಐಎ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು 10 ದಿನಗಳ ಕಾಲ ಎನ್‍ಐಎ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಹಿನ್ನೆಲೆ ನ್ಯಾಯಾಧೀಶರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎನ್ಐಎ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ಹಾಜರಾಗಿ ವಾದ ಮಂಡಿಸಿದ್ದು, ಈ ವೇಳೆ ಎನ್‍ಐಎ ಎಸ್ಪಿ ಶಿವವಿಕ್ರಮ್ ಕೂಡ ಹಾಜರಿದ್ದರು ಎನ್ನಲಾಗಿದೆ.

ಸ್ಫೋಟ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿನ್ನೆ ಬಂಧಿಸಲಾಗಿತ್ತು. ಬಳಿಕ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‍ನನ್ನು ಎನ್‍ಐಎ ಪೊಲೀಸರು ಕರೆತಂದಿದ್ದರು. ಇನ್ನು ಪ್ರಕರಣ ಸಂಬಂಧ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆಯನ್ನಾಧರಿಸಿ ವಿಚಾರಣೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಪ್ರಕರಣದ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಎನ್‍ಐಎ, ಸಾಕ್ಷಿ ಸಂಗ್ರಹಣೆಗಾಗಿ ಆರೋಪಿಗಳ ಸಹಪಾಠಿಗಳು, ಸ್ನೇಹಿತರು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಐಇಡಿ ತಂದಿದ್ದ ಮುಸಾವೀರ್ ಹಾಗೂ ರೂಪುರೇಷೆ ಸಿದ್ಧಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ತೀರ್ಥಹಳ್ಳಿಯವರಾಗಿದ್ದು, ಇವರಿಗೆ ಸಹಾಯ ಮಾಡಿದ ಮುಜಾಮೀಲ್ ಷರೀಫ್ ಎಂಬಾತನನನ್ನು ಬಂಧಿಸಲಾಗಿದೆ.
ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್‍ಐಎ ಶೋಧಕಾರ್ಯ ನಡೆಸಿದೆ. ಈಗಾಗಲೇ ಇಬ್ಬರು ಆರೋಪಿಗಳ ಪತ್ತೆಗಾಗಿ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು.
ಘಟನೆ ಹಿನ್ನೆಲೆ: ಮಾರ್ಚ್ 1ರಂದು ವೈಟ್‍ಫೀಲ್ಡ್ ಬಳಿಯಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿದ್ದು, ಈ ವೇಳೆ ಕೆಲವರು ಗಾಯಗೊಂಡಿದ್ದರು. ಬಳಿಕ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಲಾಗಿದ್ದು, ಶಂಕಿತ ಉಗ್ರನ ಬಂಧನಕ್ಕೆ ಪೊಲೀಸರು, ಎನ್‌ಐಎ ತಂಡ ಬಲೆ ಬೀಸಿದ್ದರು.












Click it and Unblock the Notifications