ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ; ಅಲ್ಲಲ್ಲಿ ಮಳೆ
ಬೆಂಗಳೂರು, ಜುಲೈ 21 : ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮುಂದಿನ 48 ಗಂಟೆಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಭಾನುವಾರ ಮಧ್ಯಾಹ್ನ 3.30ರ ಬಳಿಕ ನಗರದ ಹಲವು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಜಯನಗರ, ದೊಮ್ಮಲೂರು, ಶಾಂತಿನಗರ, ಬಸವನಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.

ಬೆಳಗ್ಗೆಯಿಂದಲೂ ನಗರದ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಮಳೆಯಾಗಿದೆ. ವಾರಾಂತ್ಯದಲ್ಲಿ ಶಾಪಿಂಗ್ ಹೋದವರು ಮಳೆಯಿಂದಾಗಿ ಪರದಾಡಿದರು. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ, ವಾಹನ ಸಂಚಾರ ನಿಧಾನವಾಗಿತ್ತು.
ಮುಂಗಾರು ಆರಂಭವಾದ ದಿನದಿಂದ ಬೆಂಗಳೂರಲ್ಲಿ ನಿರೀಕ್ಷಿತ ಮಳೆಯಾಗಿರಲಿಲ್ಲ. ಆದರೆ ಬುಧವಾರ ಒಂದೇ ದಿನ 40.3 ಮಿ.ಮೀ. ಮಳೆಯಾಗಿತ್ತು. ನಗರದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಈ ಬಾರಿ ಜುಲೈ 20 ಕಳೆದರೂ ನಗರದಲ್ಲಿ ಮಳೆಯಾಗಿಲ್ಲ.
ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications