Bengaluru-Pune Expressway: ಬೆಂಗಳೂರು- ಮುಂಬೈ ಮಹಾನಗರಗಳನ್ನು ಹತ್ತಿರವಾಗಿಸುವ ಎಕ್ಸ್‌ಪ್ರೆಸ್‌ವೇ, ಅಂಕಿಅಂಶ, ಮಾಹಿತಿ-ವಿವರ
ಬೆಂಗಳೂರು, ಜುಲೈ 29: ಬೆಂಗಳೂರು ಪುಣೆ ಎಕ್ಸ್‌ಪ್ರೆಸ್‌ವೇ ಭಾರತದ ಮಹತ್ವದ ಹೆದ್ದಾರಿ ಯೋಜನೆಗಳಲ್ಲಿ ಒಂದಾಗಿದೆ. ಇದು ಬೆಂಗಳೂರು, ಪುಣೆ ಹಾಗೂ ಮುಂಬೈ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದು ಬೆಂಗಳೂರು-ಮೈಸೂರು ನಂತರ ಕರ್ನಾಟಕದಲ್ಲಿ ಎರಡನೇ ಎಕ್ಸ್‌ಪ್ರೆಸ್‌ವೇ ಆಗಿದೆ. ಈ ಕುರಿತ ಮಾಹಿತಿ, ಅಂಕಿಅಂಶ, ವಿವರ ತಿಳಿಯಿರಿ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಮೂರು ನಗರಗಳ ನಡುವಿನ ಪ್ರಯಾಣದ ದೂರವನ್ನು 95 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಎಕ್ಸ್‌ಪ್ರೆಸ್‌ವೇ 699 ಕಿಲೋಮೀಟರ್‌ಗಳಷ್ಟು ವಿಸ್ತರಿಸಲಿದ್ದು, ಇದರ ನಿರ್ಮಾಣಕ್ಕೆ ಸುಮಾರು ₹ 50,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ನಗರಗಳ ನಡುವೆ ಪ್ರಯಾಣಿಸಲು ಏಳು ಗಂಟೆ ತೆಗೆದುಕೊಳ್ಳುತ್ತದೆ.
ಪ್ರಾಥಮಿಕ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಡಿಸೆಂಬರ್‌ನಲ್ಲಿ ಎನ್‌ಎಚ್‌ಎಐಗೆ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಅಂತಿಮ ಪ್ರಸ್ತಾವನೆಯನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಈಗ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿವೆ. ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಈ ಎಕ್ಸ್‌ಪ್ರೆಸ್‌ವೇ 2028 ರಲ್ಲಿ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.

ಈ ಯೋಜನೆಯು 12 ಜಿಲ್ಲೆಗಳನ್ನು ಒಳಗೊಂಡಿದೆ. ಅದರಲ್ಲಿ ಒಂಬತ್ತು ಕರ್ನಾಟಕದಲ್ಲಿ ಮತ್ತು ಮೂರು ಮಹಾರಾಷ್ಟ್ರದಲ್ಲಿವೆ. ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ (ಬಳ್ಳಾರಿ), ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳು ಕರ್ನಾಟಕದಲ್ಲಿ ಬರುತ್ತವೆ. ಪುಣೆ, ಸತಾರಾ ಮತ್ತು ಸಾಂಗ್ಲಿ ಜಿಲ್ಲೆಗಳು ಮಹಾರಾಷ್ಟ್ರದಲ್ಲಿ ಬರುತ್ತವೆ.
ಪುಣೆ ರಿಂಗ್ ರಸ್ತೆಯಲ್ಲಿರುವ ಕಂಜಾಲೆಯಿಂದ ಪ್ರಾರಂಭವಾಗಿ ಬೆಂಗಳೂರು ಮಹಾನಗರ ಪ್ರದೇಶದ ಸ್ಯಾಟಲೈಟ್ ರಿಂಗ್ ರಸ್ತೆಯಲ್ಲಿರುವ ಮುತಗಡಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ ಎಂದು ವರದಿ ಹೇಳಿದೆ.

ಈ ಯೋಜನೆಯಿಂದ ವ್ಯಾಪಾರ ವೃದ್ಧಿಸುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ನಿರೀಕ್ಷಿತ ಅಗಲೀಕರಣಕ್ಕಾಗಿ 55 ಫ್ಲೈಓವರ್‌ಗಳನ್ನು ನಿರ್ಮಿಸಲಾಗುತ್ತದೆ. ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಮರ ನೆಡುವಿಕೆಗೆ ಯೋಜನೆ ರೂಪಿಸಲಾಗಿದೆ.
ಈ ಹೆದ್ದಾರಿ ಒಳಗೊಳ್ಳುವ ನದಿಗಳು
*ನೀರಾ
*ಯೆರಳ
*ಚಂದ ನಾಡಿ
*ಅಗ್ರಣಿ
*ಕೃಷ್ಣ
*ಘಟಪ್ರಭಾ
*ಮಲಪ್ರಭಾ
*ತುಂಗಭದ್ರಾ
*ಚಿಕ್ಕ ಹಗರ್
*ವೇದಾವತಿ

ಹೆದ್ದಾರಿಯ ಸೌಲಭ್ಯಗಳು
*6 ರಸ್ತೆ ಸೇತುವೆಗಳು
*22 ಇಂಟರ್ಚೇಂಜ್ಗಳು
*55 ಫ್ಲೈಓವರ್‌ಗಳು
*14 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್‌ಗಳು
ಈ ಹೆದ್ದಾರಿಯಲ್ಲಿ ಬರುವ ಪ್ರಮುಖ ನಗರಗಳು
*ಜಮಖಂಡಿ
*ಬಾಗಲಕೋಟೆ
*ಬಾದಾಮಿ
*ಮುಧೋಳ
*ನರಗುಂದ
*ಗದಗ ಜಿಲ್ಲೆ (ರೋಣ)
*ಯಲಬುರ್ಗಾ, ಕೊಪ್ಪಳ ಜಿಲ್ಲೆ
*ವಿಜಯನಗರ ಜಿಲ್ಲೆ (ಕೂಡ್ಲಿಗಿ)
*ದಾವಣಗೆರೆ (ಜಗಳೂರು)
*ಮಧುಗಿರಿ
*ಚಿತ್ರದುರ್ಗ ತಾಲೂಕು
*ಕೊರಟಗೆರೆ
*ನೆಲಮಂಗಲ
*ತುಮಕೂರು ಜಿಲ್ಲೆ
*ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
*ಪುಣೆ
*ಸಾಂಗ್ಲಿ
*ಸತಾರಾ ಜಿಲ್ಲೆ












Click it and Unblock the Notifications