ಮೂರು ಕೋಟಿ ಮೌಲ್ಯದ ನಿಷೇಧಿತ ಸಿಗರೇಟ್ ಪತ್ತೆ: ಆರೋಪಿ ಬಂಧನ
ಬೆಂಗಳೂರು, ಜನವರಿ 30: ಬೆಂಗಳೂರು ನಗರದಲ್ಲಿ ನಿಷೇಧಿತ ಇ-ಸಿಗರೇಟ್‌ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಶೋಯೇಬ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಶೋಯೇಬ್, ಬ್ಲೂ ಡಾರ್ಟ್ ಮುಖಾಂತರ ದುಬೈಯಿಂದ ಹಾಗೂ ಡೆಲ್ಲಿಯ ಮಾರಾಟಗಾರರನ್ನು ಸಂಪರ್ಕಿಸಿ ಕೊರಿಯರ್ ಮುಖಾಂತರ ಸಿಗರೇಟ್ ತರಿಸಿಕೊಂಡು ಅಕ್ರಮವಾಗಿ ದುಬಾರಿ ಬೆಲೆಗೆ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಎಂನಲ್ಲಿ ಮನೆ ಮಾಡಿಕೊಂಡಿದ್ದ ಶೊಯೇಬ್, ಡನ್ಜೋ ಮುಖಾಂತರ ಗಿರಾಕಿಗಳಿಗೆ ಈ ನಿಷೇಧಿತ ಸಿಗರೇಟ್ ರವಾನಿಸುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗೆ ಆರೋಪಿ ಶೊಯೇಬ್ ಮಾರಾಟಕ್ಕೆ ಎಂದು ಒಟ್ಟು 6 ಸಾವಿರ ಈ ಸಿಗರೇಟ್ ತರಿಸಿಕೊಂಡಿದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಮಾದಕ ವಸ್ತು ನಿಗ್ರಹ ದಳ, ಆರೋಪಿಯನ್ನು ಬಂಧಿಸಿ, ಬರೋಬ್ಬರಿ 3 ಕೋಟಿ ರೂಪಾಯಿ ಅಧಿಕ ಮೌಲ್ಯದ ನಿಷೇಧಿತ ಸಿಗರೇಟ್‌ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ ಚಿನ್ನದೋಚಿದ ಖತರ್ನಾಕ್ ಕಳ್ಳಿ
ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಶಾಂತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಶಾಂತ ಸದಾಶಿವನಗರದ ಕೀರ್ತಿವರ್ಧನ್ ಎನ್ನುವವರ ಮನೆಯಲ್ಲಿ ಮೂರು ವರ್ಷದಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಮನೆ ಮಾಲೀಕರು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಮನೆ ಮಾಲೀಕರು ವಾಪಸ್ ಬರುತ್ತಿದ್ದಂತೆ ಆರೋಪಿ ಶಾಂತ ಚಿನ್ನಾಭರಣ ಕಳ್ಳರಿಂದ ಕಳ್ಳತನವಾಗಿದೆ ಎಂದು ಕಥೆ ಕಟ್ಟಿದ್ದಾಳೆ.

ನಾನು ಮಲಗಿದ್ದಾಗ ಇಬ್ಬರು ಕಳ್ಳರು ಬಂದು ಹಲ್ಲೆ ಮಾಡಿ ಕಳ್ಳತನ ಮಾಡಿದ್ದಾರೆ ಎಂದು ಶಾಂತ ತಿಳಿಸಿದ್ದಾಳೆ. ಮನೆಕೆಲಸದಾಕೆಯ ಮಾತು ನಂಬಿದ ಮಾಲೀಕ ಕೀರ್ತಿವರ್ಧನ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ವೇಳೆ ಮನೆ ಕೆಲಸದಾಕೆ ಶಾಂತಳಿಂದಲೇ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದುಬಂದಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications