ಬೆಂಗಳೂರಿನಲ್ಲಿ ಹೊಸ 'ಇವಿ ಬ್ಯಾಟರಿ' ಮತ್ತು 'ಚಾರ್ಜರ್ ಪರೀಕ್ಷಾ' ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ
ಬೆಂಗಳೂರು, ಆಗಸ್ಟ್ 23: ಸುಸ್ಥಿರ ಹಾಗೂ ನವೀನ ಚಲನಶೀಲತೆಯ ಪರಿಹಾರಗಳ ಮೇಲೆ ಗಮನಾರ್ಹ ಪ್ರಗತಿ ಹೊಂದಲು ನೆರವಾಗುವಂತೆ ಬೆಂಗಳೂರಿನಲ್ಲಿ 'ಇವಿ ಬ್ಯಾಟರಿ' ಮತ್ತು 'ಚಾರ್ಜರ್ ಪರೀಕ್ಷಾ' ಕೇಂದ್ರ ಸ್ಥಾಪನೆಗೆ ಗುರುವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿಯವರು ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನ ಜಕ್ಕೂರಿನಲ್ಲಿರುವ NTH-RRSL ಕ್ಯಾಂಪಸ್‌ನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಸೌಲಭ್ಯ ಕೇಂದ್ರ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೂಲಕ ಹಸಿರು ನಿಶಾನೆ ತೋರಿಸಿದರು. ಈ ಕೇಂದ್ರವು ಬರೋಬ್ಬರಿ 12ಕೋಟಿ ರೂ.ನಲ್ಲಿ ನಿರ್ಮಾಣವಾಗುತ್ತಿದೆ.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉದ್ಯಮಕ್ಕೆ ಈ ಕೇಂದ್ರವು ಹೆಚ್ಚು ಪೂರಕವಾಗಲಿದೆ. ಇಲ್ಲಿನ ಉದ್ಯಮದ ಕಾರ್ಯತಂತ್ರಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ ಎಂದರು.
ಬೇರೆ ರಾಜ್ಯಗಳಲ್ಲೂ ಕೇಂದ್ರ ತೆರೆಯಲು ಚಿಂತನೆ
ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯದ ಪ್ರಮುಖರಿಗೆ ಸಮೀಪದಲ್ಲಿ ಈ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸುವುರಿಂದ ಇವಿ ಉದ್ಯಮದ ತ್ವರಿತ ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. ಬೆಂಗಳೂರಿನೊಂದಿಗೆ ಮಹಾರಾಷ್ಟ್ರದ ಮುಂಬೈ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಶೀಘ್ರದಲ್ಲೇ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ಈ ಕೇಂದ್ರದ ಮೂಲಕ ಉತ್ತಮ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಸಮಗ್ರ ಪರೀಕ್ಷೆ ಮತ್ತು ಪ್ರಮಾಣೀಕರಣ ಸೇವೆಗಳನ್ನು ನೀಡಲಾಗುತ್ತದೆ. ಇದರಿಂದ ಇವಿ ತಯಾರಕರಿಗೆ ಪರಿಣಾಮಕಾರಿ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಅವರು ವಿವರಿಸಿದರು.

ಇವಿ ಪರೀಕ್ಷೆಯ ಅವಲಂಬನೆ ತಪ್ಪಲಿದೆ
ಸಿದ್ಧವಾಗಲಿರುವ ಈ ನೂತನ ಸೌಲಭ್ಯವು ಬೇರೆ ಬೇರೆ ರಾಜ್ಯಗಳಲ್ಲಿನ ಕೇಂದ್ರಗಳನ್ನು ಅವಲಂಬಿಸದೇ ಸ್ಥಳೀಯವಾಗಿ ನಿರ್ಣಾಯಕ ಪರೀಕ್ಷೆ ನಡೆಸಲು ಅನುವು ಮಾಡಿಕೊಡುತ್ತದೆ. ಇದರಿಂದ ಇವಿ ಉದ್ಯಮದ ಅಭಿವೃದ್ಧಿ ಚಕ್ರವು ವೇಗಗೊಳ್ಳುತ್ತದೆ.
ಪಂಬನ್ ಸೇತುವೆ, ಮೆಟ್ರೋ ರೈಲು ಯೋಜನೆಗಳು, ಬುಲೆಟ್ ರೈಲು ಯೋಜನೆ, ಜಲ ಜೀವನ್ ಮಿಷನ್, ಡ್ರೋನ್ ಪ್ರಮಾಣೀಕರಣ ಮತ್ತು ಇತರ ದೇಶದ ಪ್ರಮುಖ ಯೋಜನೆಗಳಲ್ಲಿ ಸ್ಥಳೀಯ ಸೌಲಭ್ಯಗಳ ಪ್ರಾಮುಖ್ಯತೆ ಎಷ್ಟಿದೆ ಎಂಬುದರ ಮಹತ್ವವನ್ನು ಅವರು ತಿಳಿಸಿದರು.
EV ಮಾರುಕಟ್ಟೆಯಲ್ಲಿ ಪೈಪೋಟಿ ಒಡ್ಡಲು ಸಹಾಯಕ
ನಮ್ಮ ಸರ್ಕಾರ ಗುಣಮಟ್ಟದ ಪರೀಕ್ಷಾ ಸೌಲಭ್ಯದ ಲಭ್ಯವಾಗುವಂತೆ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಇವಿ ತಯಾರಕರು ಸೂಕ್ತವಾಗಿ ಪೈಪೋಟಿ ಒಡ್ಡಲು ಕೇಂದ್ರ ಸಹಾಯವಾಗಲಿದೆ. ಮುಂದಿನ ದಿನಗಳಲ್ಲಿ ಇಲ್ಲಿಂದಲೇ ಹೆಚ್ಚು ಉತ್ಪನ್ನಗಳು ಜಾಗತಿಕವಾಗಿ ಪೂರೈಕೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಪಂಚದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸಾಧಿಸುವ ಗುರಿ ಭಾರತ ಹೊಂದಿದೆ. ದೇಶ 2030ರ ಹೊತ್ತಿಗೆ 500 GW ವಿದ್ಯುತ್ ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ. ಸರ್ಕಾರಿ ವಲಯದಲ್ಲಿ EV ಬ್ಯಾಟರಿ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸುವುದು ಭವಿಷ್ಯದ ಪೀಳಿಗೆಗೆ ಮಹತ್ವದ ಮೈಲಿಗಲ್ಲು ಸಾಧಿಸಿದಂತೆ ಎಂದರು.
Laid the foundation stone for a new, state-of-the-art Electric Vehicle testing facility at the National Testing House, Bengaluru. With a project outlay of ₹12 crore, the laboratory will be equipped with cutting-edge testing equipment, capable of conducting a comprehensive array… pic.twitter.com/8qdbSCSOTd
— Pralhad Joshi (@JoshiPralhad) August 22, 2024
ಈ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ, ಎನ್‌ಟಿಎಚ್ ಮಹಾನಿರ್ದೇಶಕರು ಮತ್ತು ಭಾರತದಾದ್ಯಂತ ಇವಿ ಬ್ಯಾಟರಿ ಮತ್ತು ಚಾರ್ಜರ್ ಉತ್ಪಾದನಾ ಉದ್ಯಮದ ಪ್ರಮುಖರು ಪಾಲ್ಗೊಂಡಿದ್ದರು.












Click it and Unblock the Notifications