ಹೊಸ ವರ್ಷಾಚರಣೆ: ಮಹಿಳಾ ಬೌನ್ಸರ್ಸ್ ನೇಮಕಕ್ಕೆ ಪೊಲೀಸರ ಸಲಹೆ
ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಾಚರಣೆ ಸಂಭ್ರಮಾಚರಣೆ ಕಾರ್ಯಕ್ರಮಗಳ ಆಯೋಜಕರು ಮಹಿಳಾ ಬೌನ್ಸರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಹೊಸ ವರ್ಷ ಎಂದಾಕ್ಷಣ ಅಲ್ಲಿ ಮೋಜು, ಮಸ್ತಿ, ನೃತ್ಯ, ಮದ್ಯಸೇವನೆ ಎಲ್ಲವೂ ಇರಲಿದೆ. ಈ ವೇಳೆ ವಿಶೇಷವಾಗಿ ಮದ್ಯ ಸೇವಿಸುವ ಮಹಿಳೆಯರ ರಕ್ಷಣೆಯು ಮುಖ್ಯವಾಗಿರುತ್ತದೆ. ಸಂಭ್ರಮಾಚರಣೆ ಬಳಿಕ ಅವರನ್ನು ಮನೆ ಸೇರಿದಂತೆ ಸುರಕ್ಷಿತ ಸ್ಥಳ ತಲುಪಿಸುವ ಸಂಬಂಧ ಬೌನ್ಸರ್‌ಗಳನ್ನು ನೇಮಿಸಬೇಕು ಎಂದು ಕೆ.ಆರ್.ಪುರಂ ಪೊಲೀಸ್ ಕಾರ್ಯಕ್ರಮ ಆಯೋಜಕರಿಗೆ ಸೂಚಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಮಹಿಳೆಯರು ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅಂತವರ ಭದ್ರತೆ ಮತ್ತು ಸುರಕ್ಷತೆ ನೋಡಿಕೊಳ್ಳುವುದು ಆಯೋಜಕರ ಕರ್ತವ್ಯವು ಆಗಿದೆ. ಇನ್ನೂ ಮದ್ಯ ಸೇವಿಸಿ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುವ ಮಹಿಳೆಯರನ್ನು ಗುರುತಿಸಲು ವ್ಯವಸ್ಥೆ ಮಾಡಬೇಕು. ಮದ್ಯದ ಅಮಲಿನಲ್ಲಿರುವ ಮಹಿಳೆಯರನ್ನು ಅವರ ಮನೆಗಳಿಗೆ ಕ್ಯಾಬ್ ಮೂಲಕ ಕಳುಹಿಸುವುದಾದರೆ ಚಾಲಕ ಫೋಟೊ ತೆಗೆಕೊಂಡು, ಮುಂಜಾಗ್ರತೆ ವಹಿಸಿ ಕಳುಹಿಸಬೇಕು ಎಂದರು.

ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವಿವಿಧ ಕ್ಲಬ್‌ಗಳು ಮತ್ತು ಉನ್ನತ ಮಟ್ಟದ ಪಬ್‌ಗಳು ಮತ್ತು ಹೋಟೆಲ್‌ಗಳಲ್ಲಿ ಜಗಳಗಳು ನಡೆಯುವ ಸಾಧ್ಯತೆ ಇರುತ್ತವೆ. ಕೆಲವು ಕಡೆಗಳಲ್ಲಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ. ಅವರು ನಿರ್ವಹಿಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಮಹಿಳಾ ಬೌನ್ಸರ್‌ಗಳ ನೇಮಕ ಮಾಡುವುದು ಉತ್ತಮ ಮಾರ್ಗ ಎಂದು ಅವರು ತಿಳಿಸಿದ್ದಾರೆ.
ಕಡಿಮೆ ಅವಧಿಯಲ್ಲಿ ಬೌನ್ಸರ್ ನೇಮಕ ಕಷ್ಟ
ಪೊಲೀಸ್ ಸಲಹೆ ಬಗ್ಗೆ ಪ್ರತಿಕ್ರಿಯಿಸಿರುವ ಬೃಹತ್ ಬೆಂಗಳೂರು ಹೊಟೇಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ ರಾವ್, ಅತ್ಯಂತ ಕಡಿಮೆ ಅವಧಿಯಲ್ಲಿ ಮಹಿಳಾ ಬೌನ್ಸರ್‌ಗಳನ್ನು ಆಯೋಜಿಸುವುದು, ಅದಕ್ಕೆ ವ್ಯವಸ್ಥೆ ಮಾಡುವುದು ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಬೌನ್ಸರ್‌ಗಳನ್ನು ನಿಯೋಜಿಸುವುದು ಸೂಚನೆ ಕಡ್ಡಾಯವಲ್ಲ, ಸಲಹೆಯಷ್ಟೇ. ಮಹಿಳೆಯರ ಹಿತ ರಕ್ಷಣೆಗಾಗಿ ಇದೊಂದು ಸಲಹೆ ನೀಡಲಾಗಿದೆ. ಹೊಸ ವರ್ಷಾಚರಣೆಯ ಒಂದು ಸ್ಥಳವನ್ನು ಸಂಪೂರ್ಣವಾಗಿ ಮಹಿಳೆಯರಿಗೆಂದೇ ಮೀಸಲಿಟ್ಟರೆ ಅಲ್ಲಿ ನಿಯೋಜಿಸಲಾದ ಬೌನ್ಸರ್‌ಗಳು ಸಹ ಮಹಿಳೆಯರೇ ಆಗಿರಬೇಕು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.












Click it and Unblock the Notifications