Puneeth Rajkumar: ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು.. ಹೊಸ ಅಪ್‌ಡೇಟ್ ಏನಿದೆ?
ಬೆಂಗಳೂರು, ಜೂನ್. 19: ಗೊಟ್ಟಿಗೆರೆ ಮತ್ತು ನಾಗವಾರ ನಡುವಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನಲ್ಲಿರುವ ಪಾಟರಿ ಟೌನ್ ನಿಲ್ದಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡುವ ವಿಷಯ ವೇಗ ಪಡೆದುಕೊಳ್ಳುತ್ತಿದೆ. ದಿವಂಗತ ನಟ ಪುನೀತ್ ಅವರಿಗೆ ಗೌರವ ಸಲ್ಲಿಸಲು ಈ ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.
ನಮ್ಮ ಮೆಟ್ರೋದ ಪಿಂಕ್ ಲೈನ್‌ನಲ್ಲಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿಡಲು ಒತ್ತಡ ಹೆಚ್ಚುತ್ತಿದೆ. ಗೊಟ್ಟಿಗೆರೆ ಮತ್ತು ನಾಗವಾರ ನಡುವೆ ಪಿಂಕ್ ಲೈನ್ ಹಾದು ಹೋಗಲಿದೆ. ಕರ್ನಾಟಕ ಬಹುಜನ ಫೆಡರೇಷನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022 ರ ಜನವರಿ 2ರಂದು ಪತ್ರ ಬರೆದಿತ್ತು.

ಈಗೀನ ಅಪ್‌ಡೇಟ್ ಏನು?
ಆಗ ಮನವಿಗೆ ಸ್ಪಂದಿಸಿದ್ದ ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಬಳಿಕ ಮುಖ್ಯಮಂತ್ರಿ ಕಾರ್ಯಾಲಯದಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದಿದ್ದಾರೆ.
ಸದ್ಯ ಮತ್ತೊಮ್ಮೆ ಕರ್ನಾಟಕ ಬಹುಜನ ಫೆಡರೇಷನ್ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಪಾಲರು ಮತ್ತು ಮೆಟ್ರೊ ಎಂಡಿ ಅವರಿಗೆ ಪತ್ರ ಬರೆದು ಪುನೀತ್ ರಾಜ್‌ಕುಮಾರ್ ಹೆಸರು ಇಡುವಂತೆ ಮತ್ತೆ ಮನವಿ ಮಾಡಿದೆ. ಪ್ರಧಾನಿ ಕಾರ್ಯಾಲಯ (ಪಿಎಂಒ) ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಮನವಿಯನ್ನು ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋ ಎಂಡಿಗೆ ಪತ್ರ ಬರೆದಿದ್ದಾರೆ.

ಬಿಎಂಆರ್‌ಸಿಎಲ್ ಹೇಳಿದ್ದೇನು?
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ನಿಲ್ದಾಣಕ್ಕೆ ನಾಮಕರಣ ಮಾಡುವುದು ನಿಯಮಗಳಿಗೆ ಅನುಗುಣವಾಗಿದೆಯೇ ಎಂದು ಪರಿಶೀಲಿಸುವುದಾಗಿ ಕರ್ನಾಟಕ ಬಹುಜನ ಫೆಡರೇಷನ್‌ಗೆ ತಿಳಿಸಿದೆ. ಈ ಭಾಗದ ಪಿಂಕ್ ಲೈನ್ ಕಾಮಗಾರಿ ಶೇ.50ರಷ್ಟು ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ನಮ್ಮ ಮೆಟ್ರೋ ಪಿಂಕ್ ಲೈನ್ ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗವಾಗಿದೆ. ಇದು 21.26 ಕಿಮೀ ವ್ಯಾಪಿಸಿದೆ. 13.76 ಕಿಮೀ ಭೂಗತ ಮತ್ತು 7.5 ಕಿಮೀ ಎತ್ತರದಲ್ಲಿದೆ. ಇದು ಕಳೆನ ಅಗ್ರಹಾರ, ಬನ್ನೇರುಘಟ್ಟ ರಸ್ತೆ ಮತ್ತು ನಾಗವಾರವನ್ನು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ 18 ನಿಲ್ದಾಣಗಳಿರಲಿದ್ದು, ಅವುಗಳಲ್ಲಿ 12 ಅಮಡರ್‌ಗ್ರೌಂಡ್ ನಿಲ್ದಾಣಗಳು.












Click it and Unblock the Notifications