ಪೀಣ್ಯ - ಸ್ವಸ್ತಿಕ್ ಮೆಟ್ರೋ ರೈಲ್ ರನ್ನಿಂಗ್ ಲೇಟ್
ಬೆಂಗಳೂರು,ನ. 18 : ನಮ್ಮ ಮೆಟ್ರೋ ರೀಚ್ 3 ಮಾರ್ಗದಲ್ಲಿ ಪೀಣ್ಯ ಮತ್ತು ಸ್ವಸ್ತಿಕ್ ನಡುವೆ ಸಂಚರಿಸುವ ಜನರು ಕೆಲವು ದಿನಗಳು ಕಾಯಬೇಕಾಗುತ್ತದೆ. ಮಾರ್ಗದಲ್ಲಿನ ಮೆಟ್ರೋ ರೈಲಿನ ಸಂಚಾರಕ್ಕೆ ಅಗತ್ಯ ಅನುಮತಿ ದೊರೆತಿಲ್ಲ. ಆದ್ದರಿಂದ ನವೆಂಬರ್ ಅಂತ್ಯದ ವೇಳೆಗೆ ಆರಂಭವಾಗಬೇಕಾಗಿದ್ದ ಸಂಚಾರ ಕೊಂಚ ವಿಳಂಬವಾಗಲಿದೆ.
ಮೊದಲು ನವೆಂಬರ್ ಅಂತ್ಯದ ವೇಳೆಗೆ ಅಗತ್ಯ ಇಲಾಖೆಗಳಿಂದ ಅನುಮತಿ ಪಡೆದಿ ಪೀಣ್ಯ ಮತ್ತು ಸ್ವಸ್ತಿಕ್ ನಡುವಿನ ಸಂಚಾರವನ್ನು ಆರಂಭಿಸುತ್ತೇವೆ ಎಂದು ಬಿಎಂಆರ್ ಸಿಎಲ್ ತಿಳಿಸಿತ್ತು. ಸದ್ಯ ನವೆಂಬರ್ ತಿಂಗಳು ಅಂತ್ಯಗೊಳ್ಳಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ, ರೈಲ್ವೆ ಸುರಕ್ಷತಾ ಮಂಡಳಿ ಸೇರಿದಂತೆ ಅಗತ್ಯ ಅನುಮತಿ ದೊರಕಿಲ್ಲ.

ಈ ಕುರಿತು ಹೇಳಿಕೆ ನೀಡಿರುವ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ, ರೀಚ್ 3 ಮಾರ್ಗದ ಮೆಟ್ರೋ ಸಂಚಾರದ ಕುರಿತು ಯಾವುದೇ ದಿನಾಂಕ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಅಗತ್ಯ ಪ್ರಮಾಣ ಪತ್ರಗಳು ದೊರಕಬೇಕಾಗಿದ್ದು, ನಂತರ ಸಂಚಾರ ಆರಂಭಿಸಲಾಗುವುದು. ಈ ಕುರಿತು ಯಾವುದೇ ಗಡುವು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪೀಣ್ಯ-ಸ್ವಸ್ತಿಕ್ ನಡುವೆ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್ ಸಿಎಲ್ ಈಗಾಗಲೇ ನಡೆಸಿದೆ. ಆದರೆ, ನಿಲ್ದಾಣಗಳ ಕಾಮಗಾರಿ ಪೂರ್ಣಗೊಳ್ಳದ ಕಾರಣ ರೈಲು ಸಂಚಾರ ವಿಳಂಬವಾಗುತ್ತಿದೆ. ಯಶವಂತಪುರ ನಿಲ್ದಾಣ ಶೇ 95ರಷ್ಟು, ರಾಜಾಜಿನಗರ ಶೇ 97ರಷ್ಟು ಮಾತ್ರ ಪೂರ್ಣಗೊಂಡಿವೆ.
ಸೋಪ್ ಫ್ಯಾಕ್ಟರಿ ಶೇ 74ರಷ್ಟು, ಕುವೆಂಪು ರಸ್ತೆಯ ನಿಲ್ದಾಣದ 81 ರಷ್ಟು ಮಾತ್ರ ಪೂರ್ಣಗೊಂಡಿವೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಮತ್ತು ಪೀಣ್ಯ ನಿಲ್ದಾಣಗಳ ಕಾಮಗಾರಿಯೂ ಇನ್ನೂ ಪೂರ್ಣವಾಗಬೇಕಿದೆ. ಆದ್ದರಿಂದ ನಿಲ್ದಾಣಗಳ ಕಾಮಗಾರಿ ಪೂರ್ಣಗೊಳ್ಳುವವರೆಗೂ ರೈಲು ಸಂಚಾರ ಆರಂಭವಾಗುವುದಿಲ್ಲ. (ನವೆಂಬರ್ ನಲ್ಲಿ ಯಶವಂತಪುರ-ಪೀಣ್ಯ ಮೆಟ್ರೋ ರೈಲು)
ರೀಚ್ 3 ಯೋಜನೆ ಸಾರ್ವಜನಿಕರಿಗೆ ಮುಕ್ತವಾದರೆ ಸುಮಾರು 50,000 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದು ಬಿಎಂಆರ್ ಸಿಎಲ್ ಅಂದಾಜಿಸಿದೆ. ಯೋಜನೆ ವ್ಯಾಪ್ತಿಗೆ ತುಮಕೂರು ರಸ್ತೆ ಸೇರುವುದರಿಂದ ಹೆಚ್ಚಿನ ಜನರನ್ನು ನಿರೀಕ್ಷಿಸಲಾಗುತ್ತಿದೆ. ಆದರೆ, ಈ ಮಾರ್ಗ ಸಂಚಾರಕ್ಕೆ ಯಾವಾಗ ಮುಕ್ತ ವಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications