ದಂಡ ಕಟ್ಟಿ ಎಂದು ಕರೆ: ಬೆಂಗಳೂರು ಸಂಚಾರಿ ಪೊಲೀಸರ ಎಚ್ಚರಿಕೆ
ಬೆಂಗಳೂರು, ನವೆಂಬರ್ 25: ಸೈಬರ್ ವಂಚಕರು ವಿವಿಧ ಮಾದರಿಯಲ್ಲಿ ಜನರ ಹಣವನ್ನು ಕದಿಯಲು ಪ್ರಯತ್ನವನ್ನು ನಡೆಸುತ್ತಾರೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ದಂಡ ಮೊತ್ತವನ್ನು ಪಾವತಿ ಮಾಡಿ ಎಂದು ನಕಲಿ ಕರೆಗಳು ಬರುತ್ತಿವೆ. ಆದ್ದರಿಂದ ನಗರ ಸಂಚಾರಿ ಪೊಲಿಸರು ಈ ಕುರಿತು ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಡಿ ಅಥವಾ ಹಣ ಪಾವತಿಯನ್ನು ಮಾಡಬೇಡಿ. ನಮ್ಮ ಇಲಾಖೆಯನ್ನು ನೇರವಾಗಿ ಸಂಪರ್ಕಿಸಿ ಎಂದು ಕರೆ ನೀಡಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ನಕಲಿ ಕರೆಗಳು ಮತ್ತು ದುರುದ್ದೇಶಪೂರಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಎಂದು ಹೇಳಿಕೊಳ್ಳುವ ನಕಲಿ ಕರೆಗಳು ಮತ್ತು ಸಂದೇಶಗಳ ಬಗ್ಗೆ ಸಂಚಾರ ಪೊಲೀಸ್ ಇಲಾಖೆಗೆ ಹಲವಾರು ದೂರುಗಳು ಬರುತ್ತಿವೆ. ಈ ಕರೆಗಳು ಮತ್ತು ಸಂದೇಶಗಳು ನಾಗರೀಕರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ದೋಚಲು ವಾಮಮಾರ್ಗದಲ್ಲಿ ಪಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.

ನಕಲಿ ಕರೆಗಳು ಮತ್ತು ದೂರುಗಳ ಬಗ್ಗೆ ಜಾಗರೂಕರಾಗಿರಿ: ನಕಲಿ ದಂಡ ಅಥವಾ ದಂಡವನ್ನು ಪಾವತಿಸುವಂತೆ ಕೋರಿ ಸಂಚಾರ ಪೊಲೀಸ್ ಇಲಾಖೆಯಿಂದ ಎಂದು ಹೇಳಿಕೊಳ್ಳುವ ಕರೆಗಳ ಬಗ್ಗೆ ಜಾಗರೂಕರಾಗಿರಿ.
ಸಂಚಾರ ನಿಯಮ ಉಲ್ಲಂಘನೆಗಳ ತುಣುಕನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಮತ್ತು ಪಾವತಿಗೆ ಒತ್ತಾಯಿಸುವ ಸಂದೇಶಗಳು. ನಕಲಿ ವಿಮೆ ಅಥವಾ ನೋಂದಣಿ ಸೇವೆಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಕರೆಗಳು, ದುರುದ್ದೇಶಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ, ದಾಖಲೆ ಅಪ್‌ಲೋಡ್ ಮಾಡಬೇಡಿ, ಯಾವುದೇ ಡೌನ್‌ಲೋಡ್ ಮಾಡಬೇಡಿ ಎಂದು ತಿಳಿಸಲಾಗಿದೆ.
ಸಂಚಾರ ಪೊಲೀಸರೆಂದು ಹೇಳಿಕೊಂಡು ಮತ್ತು ನಿಮ್ಮ ವಾಹನವು ಹಿಟ್ & ರನ್ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ತಿಳಿಸುವುದು. ವಂಚಕರು ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ಕರೆಯನ್ನು ಪೊಲೀಸ್ (ನಕಲಿ) ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿಕೊಳ್ಳುವ ಅಥವಾ ಪಾವತಿಯನ್ನು ದೃಢೀಕರಿಸಲು ನಿಮ್ಮ ಫೋನ್‌ನಿಂದ 1, 2 ಇತ್ಯಾದಿ ಸಂಖ್ಯೆಗಳನ್ನು ಒತ್ತಲು ಕೇಳುವ ಕರೆಗಳು ಬರುತ್ತಿದ್ದು, ಎಚ್ಚರಿಕೆಯಿಂದ ಇರಿ ಎಂದು ಕರೆ ನೀಡಲಾಗಿದೆ.
ನಾಗರೀಕರಿಗೆ ಸಲಹೆಗಳು
* ಅಂತಹ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.
* ಅನುಮಾನಾಸದ ಲಿಂಕ್‌ಗಳ ಮೇಲೆ ಕ್ಲಿಕ್, ಡೌನ್‌ಲೋಡ್ ಮಾಡಬೇಡಿ
* ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಡಿ, ಹಣ ಪಾವತಿಸಬೇಡಿ
* ನಮ್ಮ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ.
ಸುರಕ್ಷತಾ ಮುನ್ನೆಚ್ಚರಿಕೆಗಳು
* ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆಗಳಲ್ಲಿ (080-22868550/22868444) ದೂರುಗಳನ್ನು ದಾಖಲಿಸಿ.
* ಮಾಹಿತಿಯನ್ನು ಒದಗಿಸುವ ಮೊದಲು ಅಧಿಕಾರಿಗಳ ಗುರುತುಗಳನ್ನು ಪರಿಶೀಲಿಸಿ.
* ದಂಡ ಅಥವಾ ಸೇವೆಗಳಿಗಾಗಿ, ದಂಡ ಪಾವತಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ.
* ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳನ್ನು ನವೀಕೃತವಾಗಿಸಿಕೊಳ್ಳಿ
ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಿ
ನೀವು ಯಾವುದೇ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ, ತಕ್ಷಣ [email protected] ಗೆ ವರದಿ ಮಾಡಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications