ಛೇ.. ಪಾದರಾಯನಪುರದ ಕಿಡಿಗೇಡಿಗಳನ್ನು ಹಿಡಿದ ಪೊಲೀಸರಿಗೆ ಇದೆಂಥಾ ಶಿಕ್ಷೆ!
ಬೆಂಗಳೂರು, ಏಪ್ರಿಲ್ 25: ಬೆಂಗಳೂರಿನ ಪಾದರಾಯನಪುರದಲ್ಲಿ ಕಳೆದ ಭಾನುವಾರ ರಾತ್ರಿ ಗದ್ದಲದ ವಾತಾವರಣ ಉಂಟಾಗಿತ್ತು. ಕೊರೊನಾ ವಾರಿಯರ್ಸ್ ಕರ್ತವ್ಯಕ್ಕೆ ಪಾದರಾಯನಪುರದ ಪುಂಡರು ಅಡ್ಡಿ ಪಡಿಸಿದ್ದರು. ಕ್ವಾರಂಟೈನ್ ಸಲುವಾಗಿ ಪಾದರಾಯನಪುರದ ಶಂಕಿತರನ್ನು ಶಿಫ್ಟ್ ಮಾಡಲು ಮುಂದಾದಾಗ ಆರೋಗ್ಯ ಕಾರ್ಯಕರ್ತರ ಮೇಲೆ ಕೆಲ ಯುವಕರು ಹಲ್ಲೆಗೆ ಯತ್ನಿಸಿದ್ದರು.
ಈ ಪ್ರಕರಣ ಸಂಬಂಧ 119 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹಿಡಿಯಲು ಹೋಗಿದ್ದ ಪೊಲೀಸರಿಗೆ ಇದೀಗ ಪ್ರಾಣ ಭಯ ಉಂಟಾಗಿದೆ. ಯಾಕಂದ್ರೆ, 119 ಆರೋಪಿಗಳ ಪೈಕಿ 5 ಮಂದಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ, ಆರೋಪಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 186 ಪೊಲೀಸ್ ಸಿಬ್ಬಂದಿಯನ್ನು ಇದೀಗ ಹೋಂ ಕ್ವಾರೆಂಟೈನ್ ಮಾಡಲಾಗಿದೆ.

ಎಲ್ಲರಿಗೂ ಹೋಂ ಕ್ವಾರಂಟೈನ್
ಪಾದರಾಯನಪುರದ ಆರೋಪಿಗಳನ್ನು ಹಿಡಿಯಲು ಕೇಂದ್ರ ಹಾಗೂ ಪಶ್ಚಿಮ ವಿಭಾಗದ ಒಟ್ಟು 186 ಪೊಲೀಸರು ಭಾಗಿಯಾಗಿದ್ದರು. ಇಂದು ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಹೋಂ ಕ್ವಾರಂಟೈನ್ ಮಾಡಲಾಗಿದೆ. ಪಾದರಾಯನಪುರದ ಪುಂಡರನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಕ್ವಾರಂಟೈನ್ ಶಿಕ್ಷೆ ಸಿಕ್ಕಂತಾಗಿದೆ.

ಕೋವಿಡ್-19 ಪರೀಕ್ಷೆ
186 ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವಶ್ಯಕತೆ ಇದ್ದಲ್ಲಿ ಕೆಲ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ.

ಪೊಲೀಸ್ ಸಿಬ್ಬಂದಿ ಬೇಸರ
ಪಾದರಾಯನಪುರದ ಕಿಡಿಗೇಡಿಗಳ ಪತ್ತೆ ಕಾರ್ಯದ ವೇಳೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಕೋವಿಡ್-19 ವೈದ್ಯರು ಅರಿವು ಮೂಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ತರಬೇತಿ ಪಡೆದು ಪಿಪಿಇ ಕಿಟ್ ಹೊಂದಿದ್ದ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸದೆ, ಬರೀ ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ ಕೊಟ್ಟು ಫೀಲ್ಡ್ ಗೆ ಇಳಿಸಿದ್ದರು ಅಂತ ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ವಿಚಾರಣೆ
ಪಾದರಾಯನಪುರದ ಗಲಾಟೆಗೆ ಕಾರಣವಾದ 83 ಆರೋಪಿಗಳನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ 2 ಗಂಟೆಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು.












Click it and Unblock the Notifications