Jailer: ಬೆಂಗಳೂರಿನಲ್ಲಿ ರಜನಿಕಾಂತ್ ಜೈಲರ್ ಕನ್ನಡ ವರ್ಷನ್‌ಗೆ ಕೆಲವೇ ಶೋ, ತಮಿಳಿಗೆ 800ಕ್ಕೂ ಹೆಚ್ಚು ಶೋ!
ಬೆಂಗಳೂರು, ಆಗಸ್ಟ್ 7: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗುತ್ತಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣಲಿದೆ. ಆದರೆ ತಮಿಳು ವರ್ಷನ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿತ್ರದ ಕನ್ನಡ ವರ್ಷನ್ ಶೋ ಸಂಖ್ಯೆ ಕಡಿಮೆ ಇದೆ.
ಇತ್ತೀಚೆಗೆ ಬಿಡುಗಡೆಯಾದ ರಜನಿಕಾಂತ್‌ರ ಜೈಲರ್ ತಮಿಳು ಚಿತ್ರಕ್ಕೆ ಟಿಕೆಟ್ ಸಿಗುವುದು ಕಷ್ಟವಾಗುತ್ತಿದೆ. ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ರಜನಿಕಾಂತ್ ಸಿನೆಮಾ ಬಂತೆಂದರೆ ಅಭಿಮಾನಿಗಳು ಹುಚ್ಚೆದ್ದು ಅವರ ಸಿನಿಮಾ ವೀಕ್ಷಣೆ ಮಾಡುತ್ತಾರೆ. ಅದರೆ ಇದೇ ಸಿನಿಮಾ ಕನ್ನಡ ಡಬ್ಬಿಂಗ್‌ನಲ್ಲಿ ನೋಡುವವರು ಅಲ್ಪವೇ ಜನ ಇದ್ದಾರೆ.

ಜೈಲರ್ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದು, ಸಂಗೀತ ನಿರ್ದೇಶಕ ಅನಿರುದ್ಧ್ ಮ್ಯೂಸಿಕ್ ನೀಡಿದ್ದಾರೆ. ರಜನಿ ಸಿನಿಮಾಗಳು ವಿದೇಶಗಳಲ್ಲಿರುವ ಅಭಿಮಾನಿಗಳಲ್ಲೂ ರೋಮಾಂಚನ ಮೂಡಿಸಿವೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಖ್ಯಾತ ನಟರು ನಟಿಸಿದ ಸಿನಿಮಾಗಳು ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಆಯಾ ಪ್ರದೇಶದ ಜನರನ್ನು ಆಕರ್ಷಣೆ ಮಾಡಿ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿಕೊಳ್ಳುತ್ತದೆ.
ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಸಿನಿಮಾಗಳು ಹೆಚ್ಚು ಅಭಿಮಾನಿಗಳನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿವೆ. ತಮಿಳು, ತೆಲುಗು, ಮಲೆಯಾಳಿ, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಆಯಾ ಭಾಷೆಗಳಲ್ಲಿ ಕರ್ನಾಟಕದಲ್ಲಿ ಅದೂ ಬೆಂಗಳೂರಿನಲ್ಲಿ ಪ್ರದರ್ಶನವಾದರೆ ಅದೇ ಸಿನಿಮಾಗಳು ಕನ್ನಡ ವರ್ಷನ್‌ನಲ್ಲಿ ಬಿಡುಗಡೆಯಾದಾಗ ಓಡುವುದು ಕಡಿಮೆ ಮಾತ್ರವಲ್ಲ, ಜನರು ಹೋಗಲು ಹಿಂಜರಿಯುತ್ತಾರೆ.

ಜೈಲರ್ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಅವರೂ ಕೂಡ ನಟಿಸಿದ್ದರೂ ಕನ್ನಡ ಜೈಲರ್ ಡಬ್ಬಿಂಗ್ ಸಿನಿಮಾ ವೀಕ್ಷಿಸಲು ಬರುವವರ ಸಂಖ್ಯೆ ಅತ್ಯಲ್ಪವಾಗಿದೆ. ಜೈಲರ್ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದ್ದು, ಈಗಾಗಲೇ ಆನ್ಲೈನ್ಲ್ಲಿ ಟಿಕೆಟ್ ಬುಕಿಂಗ್ ಶುರು ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲಿ ಜೈಲರ್ ಸಿನಿಮಾ ಮೂಡಿ ಬರುತ್ತಿದೆ.
ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದೆ. ಆ ಪೈಕಿ ತಮಿಳು ವರ್ಷನ್‌ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಿಲೀಸ್ಗೆ ಇನ್ನೂ ನಾಲ್ಕೈದು ದಿನ ಬಾಕಿ ಇದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಶೋ ಸೇರ್ಪಡೆ ಆಗಬಹುದು. ಆದರೆ, ತಮಿಳು ವರ್ಷನ್‌ಗೆ ಕೊಟ್ಟಷ್ಟು ಶೋಗಳನ್ನು ಕನ್ನಡಕ್ಕೆ ನೀಡುವುದಿಲ್ಲ. ಹೀಗಾಗಿ, ಅನೇಕರು ಶಿವರಾಜ್ಕುಮಾರ್ ವಿರುದ್ಧ ಬೇಸರಗೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಶೋ ಕೊಡಿಸಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಜೈಲರ್ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಮೂಲಕ ರಜನಿಕಾಂತ್ ಮತ್ತೊಂದು ದೊಡ್ಡ ಗೆಲುವು ಕಾಣುವ ಭರವಸೆಯಲ್ಲಿದ್ದಾರೆ. ಜೈಲರ್' ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಪಾತ್ರ ಕೇವಲ 10 ನಿಮಿಷ ಬರಲಿದೆ. ಈ ವಿಚಾರವನ್ನು ಅವರು ಈ ಮೊದಲೇ ಹೇಳಿಕೊಂಡಿದ್ದರು. ಈ ಚಿತ್ರದ ಟ್ರೇಲರ್ನಲ್ಲಿ ಅವರು ಕಾಣಿಸಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರದ ಕಾವಾಲ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ.












Click it and Unblock the Notifications