ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದ ಕೌಶಿಕ್ ಸಿಬಿಐ ವಶಕ್ಕೆ
ಬೆಂಗಳೂರು, ಮೇ 15 : ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾದ ಕೌಶಿಕ್ ಸತ್ಯಪಾಲ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಆತನನ್ನು ನವದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆ.
ಸಿಬಿಐ ಅಧಿಕಾರಿಗಳು ಗುರುವಾರ ಸಂಜೆ ಬೆಂಗಳೂರಿನಲ್ಲಿ ಬಂಧಿಸಿದ ಕೌಶಿಕ್‌ನನ್ನು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು. [ಅಶ್ಲೀಲ ವಿಡಿಯೋ ಅಪ್ ಮಾಡುತ್ತಿದ್ದವ ಸಿಬಿಐ ಬಲೆಗೆ]

ಅಧಿಕಾರಿಗಳ ಮನವಿ ಪುರಸ್ಕರಿಸಿದ ಕೋರ್ಟ್ ನಾಲ್ಕು ದಿನಗಳ ಕಾಲ ಕೌಶಿಕ್‌ನನ್ನು ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. ಅಧಿಕಾರಿಗಳು ಸತ್ಯಪಾಲ್‌ನನ್ನು ಹೆಚ್ಚಿನ ವಿಚಾರಣೆಗಾಗಿ ನವದೆಹಲಿ ಮತ್ತು ಒಡಿಸ್ಸಾಕ್ಕೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.
ದೊಡ್ಡ ಜಾಲವೇ ಇದೆ : ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ದೊಡ್ಡ ಜಾಲವೇ ಇದೆ ಎಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಲವು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಕೌಶಿಕ್ 2013ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಕಾರು ಚಾಲಕನಾಗಿ ಆತ ಕೆಲಸ ಮಾಡುತ್ತಿದ್ದ. ಕೌಶಿಕ್ ಹಲವಾರು ವಿಡಿಯೋಗಳನ್ನು ಬೆಂಗಳೂರಿನಿಂದ ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಸುಪ್ರೀಂಕೋರ್ಟ್ ಸೂಚನೆ ಅನ್ವಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಸಿಬಿಐ ತನಿಖೆಯ ಪ್ರಗತಿ ಕುರಿತು ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಿದೆ.












Click it and Unblock the Notifications