ನಮ್ಮ ಮೆಟ್ರೋ ಅಲ್ಲ ಈಗ ಮೆಟ್ರೋ ನಿಯೋ; ಯೋಜನೆ ವಿವರ
ಬೆಂಗಳೂರು, ಏಪ್ರಿಲ್ 18; ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಎರಡು ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಈಗ 5 ಕಿ. ಮೀ. ವ್ಯಾಪ್ತಿಯಲ್ಲಿ ಮೆಟ್ರೋ ನಿಯೋ ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಬೆಂಗಳೂರಿನ ಮೊದಲ ಮೆಟ್ರೋ ನಿಯೋ ಮಾರ್ಗ ಸುಮಾರು 5 ಕಿ. ಮೀ. ಒಳಗೊಂಡಿದೆ. ಟೆಕ್ ಕಂಪನಿಗಳನ್ನು ಸಂಪರ್ಕಿಸುವ ಈ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ (ಯೆಲ್ಲೊ) ಮಾರ್ಗದಲ್ಲಿ ನಿರ್ಮಾಣವಾಗಲಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿ ನಗರದ ಮೊದಲ ಮೆಟ್ರೋ ನಿಯೋ ಮಾರ್ಗದ ಪ್ರಸ್ತಾವನೆ ಸಲ್ಲಿಸಿದೆ. ಎಲೆಕ್ಟ್ರಾನಿಕ್ ಸಿಟಿಗೆ ಪ್ರತಿದಿನ ಲಕ್ಷಾಂತರ ಐಟಿ ಉದ್ಯೋಗಿಗಳು ಸಂಚಾರ ನಡೆಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ.

ಪೀಕ್ ಅವರ್‌ಗಳಲ್ಲಿ ಇಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ಮೆಟ್ರೋ ನಿಯೋ ಯೋಜನೆ ಸಿದ್ಧಪಡಿಸಲಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಬಸ್ ಮಾದರಿಯ ವಾಹನ ಸಂಚಾರ ನಡೆಸಲಿದೆ.
'ಟೆಕ್ ಹಳ್ಳಿ ಎಕ್ಸ್‌ಪ್ರೆಸ್' ಎಂಬ ಹೆಸರಿನಲ್ಲಿ ಈ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. 10 ಮೆಟ್ರೋ ನಿಲ್ದಾಣದ ವ್ಯಾಪ್ತಿಗೆ ಸೇರುವಂತೆ ಸುಮಾರು 5 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ನಿಯೋ ಸಂಚರಿಸಲಿದೆ.

ಇನ್ಫೋಸಿಸ್ ಫೌಂಡೇಷನ್, ಕೊನಪ್ಪನ ಅಗ್ರಹಾರ, ವಿಪ್ರೋ, ಇಂಟರ್‌ಫೆಕ್ಸ್, ಹ್ಯಾಪಿಯೆಸ್ಟ್ ಮೈಂಡ್ ಸೇರಿದಂತೆ 10 ನಿಲ್ದಾಣಗಳಿ ನಿಯೋ ವ್ಯಾಪ್ತಿಗೆ ಸೇರಲಿವೆ. 250 ಜನರು ಪ್ರಯಾಣ ಮಾಡಬಹುದಾದದ 18 ರಿಂದ 25 ಮೀಟರ್ ಬಸ್‌ಗಳನ್ನು ಈ ಯೋಜನೆಯಡಿ ಓಡಿಸಲಾಗುತ್ತದೆ.
ರಬ್ಬರ್ ಗಾಲಿಗಳನ್ನು ಹೊಂದಿರುವ ಈ ಬಸ್‌ಗಳು ಎಲೆಕ್ಟ್ರಿಕ್ ರೈಲು ಎಂಜಿನ್ ಮಾದರಿಯಲ್ಲಿ ಮೇಲ್ಭಾಗದಲ್ಲಿನ ವೈರ್‌ಗಳ ಮೂಲಕ ವಿದ್ಯುತ್ ಪಡೆಯಲಿವೆ. ಇದು ನಮ್ಮ ಮೆಟ್ರೋ ಯೋಜನೆಗೆ ಪೂರಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮೆಟ್ರೋ ನಿಯೋ ಮೆಟ್ರೋಗಿಂತ ಅಗ್ಗವಾಗಿದೆ. ಹೆಚ್ಚಿನ ಪ್ರಯಾಣಿಕರನ್ನು ಇದು ಆಕರ್ಷಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಪ್ರತಿದಿನ ಸುಮಾರು 1.5 ಲಕ್ಷ ಜನರು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ.
ನಮ್ಮ ಮೆಟ್ರೋ ಯೋಜನೆಗೆ ಹೋಲಿಕೆ ಮಾಡಿದರೆ ನಿಯೋ ಮೆಟ್ರೋ ಯೋಜನೆ ವೆಚ್ಚವೂ ಕಡಿಮೆ ಎಂದು ಅಂದಾಜಿಸಲಾಗಿದೆ. ಒಂದು ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ 250 ಕೋಟಿ ವೆಚ್ಚವಾದರೆ ನಿಯೋ ಮಾರ್ಗ ನಿರ್ಮಾಣಕ್ಕೆ 70 ರಿಂದ 80 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಮೆಟ್ರೋ ನಿಯೋ ಕಾಂಕ್ರಿಟ್ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಈ ಬಸ್‌ಗಳು ಅತ್ಯಾಧುನಿಕ ಬೋಗಿಯ ವ್ಯವಸ್ಥೆ ಹೊಂದಿವೆ. ಸಂಪೂರ್ಣ ಹವಾನಿಯಂತ್ರಿತವಾದ ಇದು ಸ್ವಯಂ ಚಾಲಿನ ನಿಲ್ದಾಣದ ಮಾಹಿತಿ ನೀಡುವ ವ್ಯವಸ್ಥೆ ಒಳಗೊಂಡಿವೆ. ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ಪಡೆಯುವ ವೆಂಡಿಂಗ್ ಯಂತ್ರವನ್ನು ಇದು ಹೊಂದಿರಲಿದೆ.
ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ನಿಯೋ ಮೆಟ್ರೋ ಯೋಜನೆ ಕುರಿತು ಪ್ರಸ್ತಾಪಿಸಿತ್ತು. ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಇದನ್ನು ಜಾರಿಗೊಳಿಸಲು ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಿತ್ತು. ಮಹಾರಾಷ್ಟ್ರ ರಾಜ್ಯದ ನಾಸಿಕ್ ದೇಶದಲ್ಲಿ ನಿಯೋ ಮೆಟ್ರೋ ಜಾಲ ಹೊಂದುವ ಮೊದಲ ನಗರವಾಗಲಿದೆ.
ಬೆಂಗಳೂರು ನಗರದಲ್ಲಿ ಈ ಯೋಜನೆ ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ಎರಡು ವರ್ಷಗಳಲ್ಲಿ ಉದ್ಯಾನ ನಗರಿಯಲ್ಲಿ ನಿಯೋ ಮೆಟ್ರೋ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಬಿಎಂಆರ್‌ಸಿಎಲ್ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ ಮೆಟ್ರೋ ರೈಲು ಕಾಮಗಾರಿಯನ್ನು ನಡೆಸುತ್ತಿದೆ.












Click it and Unblock the Notifications