ಆಫೀಸ್ ಒಳಗೆ ಬೈಕ್ ಓಡಿಸಿದ ಬಾಸ್! ಉದ್ಯೋಗಿಗೆ ಸ್ಕೂಟಿ ಗಿಫ್ಟ್ ನೀಡಿದ ನೋಬ್ರೋಕರ್ CEO ವಿಡಿಯೋ ವೈರಲ್
ಬೆಂಗಳೂರು: ನಮಗೆ ತಿಳಿದಿರುವ ಹಾಗೆ ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳು ಒಳ್ಳೆಯ ಸಾಧನೆ ಮಾಡಿದಾಗ, ಅವರನ್ನು ಪ್ರೋತ್ಸಾಹಿಸಲು ಬೋನಸ್, ಪ್ರಶಸ್ತಿ ಪತ್ರ ಅಥವಾ ಗಿಫ್ಟ್ ವೋಚರ್‌ಗಳನ್ನ ನೀಡುತ್ತಾರೆ. ಆದರೆ, ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪನಿಯೊಂದರ ಸಿಇಒ ತಮ್ಮ ಉದ್ಯೋಗಿಯೊಬ್ಬರ ಸಾಧನೆಯನ್ನ ಅತ್ಯಂತ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.
ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನ ಕೇವಲ ಔಪಚಾರಿಕವಾಗಿ ನಡೆಸುವ ಬದಲು, ಸ್ವತಃ ಸಿಇಒ ಕಚೇರಿಯೊಳಗೆ ಹೊಸ ಸ್ಕೂಟಿಯನ್ನು ಓಡಿಸಿಕೊಂಡು ಬಂದು ಉದ್ಯೋಗಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಅಪರೂಪದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ನೋಬ್ರೋಕರ್ ಸಿಇಒ ಅಮಿತ್ ಕುಮಾರ್ ಅಗರ್ವಾಲ್ ಅವರ ವಿಭಿನ್ನ ಪ್ರಯತ್ನ
ಹೌದು, ಈ ರೀತಿ ವಿಭಿನ್ನವಾಗಿ ಪ್ರಯತ್ನಿಸಿದವರು ಪ್ರಖ್ಯಾತ ರಿಯಲ್ ಎಸ್ಟೇಟ್ ಮತ್ತು ಪ್ರಾಪರ್ಟಿ ಪೋರ್ಟಲ್ ಆಗಿರುವ 'ನೋಬ್ರೋಕರ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಅಮಿತ್ ಕುಮಾರ್ ಅಗರ್ವಾಲ್ ಅವರು. ಸಾಮಾಜಿಕ ಜಾಲತಾಣ 'ಎಕ್ಸ್'ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಆಫೀಸ್ ಕಾರಿಡಾರ್‌ನಲ್ಲಿ ಕೆಂಪು ಬಣ್ಣದ ಹೊಸ ಸ್ಕೂಟಿಯನ್ನ ಅತ್ಯಂತ ಉತ್ಸಾಹದಿಂದ ಓಡಿಸುತ್ತಿರುವುದನ್ನ ಕಾಣಬಹುದು. ಆಫೀಸ್‌ನ ಇತರ ಉದ್ಯೋಗಿಗಳು ಖುಷಿಯಿಂದ ಚಪ್ಪಾಳೆ ತಟ್ಟುತ್ತಾ ಅವರನ್ನು ಹುರಿದುಂಬಿಸುತ್ತಿದ್ದಾರೆ. "ಆ ದಿನ ನನಗೊಂದು ಅತಿ ಮುಖ್ಯವಾದ ಕೆಲಸವಿತ್ತು. ಅದೇ ಸ್ಕೂಟಿ ಓಡಿಸುವುದು!" ಎಂದು ಅಗರ್ವಾಲ್ ಅವರು ತಮ್ಮ ಪೋಸ್ಟ್‌ಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಈ ಆಕರ್ಷಕ ಉಡುಗೊರೆಯನ್ನು ನೋಬ್ರೋಕರ್ ಕಂಪನಿಯ 'ಪ್ಯಾಕರ್ಸ್ ಅಂಡ್ ಮೂವರ್ಸ್' ವಿಭಾಗದ ಅತ್ಯುತ್ತಮ ತ್ರೈಮಾಸಿಕ ಸಾಧನೆಗಾಗಿ ನೀಡಲಾಗಿದೆ. ಈ ವಿಭಾಗವು ಕಳೆದ ತ್ರೈಮಾಸಿಕದಲ್ಲಿ ದೊಡ್ಡ ಗುರಿಯನ್ನ ತಲುಪಿ ಅದ್ಭುತ ಯಶಸ್ಸು ಕಂಡಿತ್ತು. ಈ ಸಾಧನೆಯನ್ನು ಸಂಭ್ರಮಿಸುವ ಉದ್ದೇಶದಿಂದ ಸಂಸ್ಥೆಯು ಹಲವು ಬಹುಮಾನಗಳನ್ನ ಆಯೋಜಿಸಿತ್ತು. ಆ ಪೈಕಿ ಅತಿ ಹೆಚ್ಚು 'ಹಾರ್ಸ್ ಪವರ್' ಹೊಂದಿದ್ದ ಪ್ರಮುಖ ಬಹುಮಾನವೆಂದರೆ ಇದೇ ಸ್ಕೂಟಿ.
ಈ ಸ್ಕೂಟಿಯನ್ನು ಅರ್ಹ ಉದ್ಯೋಗಿಯೊಬ್ಬರಿಗೆ ನೀಡುವ ಮುನ್ನ ಆ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಅಮಿತ್ ಕುಮಾರ್ ಅಗರ್ವಾಲ್ ಅವರು ಈ ರೀತಿ ಕಚೇರಿಯೊಳಗೆ ರೈಡ್ ಮಾಡಿದ್ದಾರೆ. "ಜನರು ಯಾವುದನ್ನಾದರೂ ಸಾಧಿಸಲು ತಮ್ಮ ಸಮಯ, ಶ್ರಮ ಮತ್ತು ಶಕ್ತಿಯನ್ನು ಮುಡಿಪಾಗಿಟ್ಟಾಗ, ಆ ಸಂಭ್ರಮದ ಕ್ಷಣ ಕೇವಲ ಒಂದು ಸಾಮಾನ್ಯ ಪ್ರಶಸ್ತಿ ನೀಡುವುದಕ್ಕಿಂತ ದೊಡ್ಡದಾಗಿರಬೇಕು ಎಂಬುದು ನನ್ನ ಉದ್ದೇಶವಾಗಿತ್ತು" ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಟೀಮ್ ವರ್ಕ್ ಮತ್ತು ಒಗ್ಗಟ್ಟಿನ ಯಶಸ್ಸಿಗೆ ಮೆಚ್ಚುಗೆ
ಈ ಯಶಸ್ಸು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ತಂಡದ್ದಲ್ಲ, ಬದಲಾಗಿ ಇಡೀ ಸಂಸ್ಥೆಯ ಟೀಮ್ ವರ್ಕ್ ಎಂದು ಸಿಇಒ ಶ್ಲಾಘಿಸಿದ್ದಾರೆ. "ಯಾವುದೇ ದೊಡ್ಡ ಮೈಲಿಗಲ್ಲನ್ನು ಕೇವಲ ಒಂದು ತಂಡ ಮಾತ್ರ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸೇಲ್ಸ್ ತಂಡವು ಹೆಚ್ಚಿನ ಗ್ರಾಹಕರನ್ನು ಕರೆತಂದಿತು. ಸರ್ವಿಸಿಂಗ್ ತಂಡವು ಪ್ರತಿದಿನವೂ ಗ್ರಾಹಕರಿಗೆ ಯಾವುದೇ ಅಡಚಣೆಯಾಗದಂತೆ ಎಚ್ಚರವಹಿಸಿತು. ಪಾರ್ಟ್ನರ್ ಮ್ಯಾನೇಜ್ಮೆಂಟ್ ವಿಭಾಗವು ಎಲ್ಲವನ್ನೂ ಸಮರ್ಪಕವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿತು. ಈ ಮೂರರಲ್ಲಿ ಯಾವುದೇ ಒಂದು ವಿಭಾಗ ಇಲ್ಲದಿದ್ದರೂ, ಈ ಮೈಲಿಗಲ್ಲು ಕೇವಲ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಆಗಿಯೇ ಉಳಿಯುತ್ತಿತ್ತು" ಎಂದು ಅವರು ತಂಡದ ಒಗ್ಗಟ್ಟನ್ನ ಹೊಗಳಿದ್ದಾರೆ.
I had a very important job that day. Ride a Scooty.
— Amit Kumar Agarwal (@AmitKumarA) July 21, 2026
Our Packers & Movers team was celebrating their amazing quarter, and while there were plenty of rewards waiting to be handed out, one reward had a little more horsepower than the rest.
When people invest their time, effort… pic.twitter.com/VrlZbCIdBx
ಅಂತಿಮವಾಗಿ, ಕೇವಲ ಔಪಚಾರಿಕ ಸಮಾರಂಭಗಳ ಮೂಲಕ ಉದ್ಯೋಗಿಗಳಿಗೆ ಧನ್ಯವಾದ ಹೇಳುವ ಬದಲು, ಅವರ ಸಂಭ್ರಮದಲ್ಲಿ ಬಾಸ್ ಕೂಡ ಪಾಲ್ಗೊಳ್ಳುವುದು ಅತ್ಯುತ್ತಮ ವಿಧಾನ ಎಂದು ಅವರು ತಿಳಿಸಿದ್ದಾರೆ. "ಪ್ರತಿದಿನ ಕೆಲಸ ಮಾಡುವ ಜನರ ಮುಂದೆ ಸ್ವಲ್ಪ ತಮಾಷೆಯಾಗಿ ಕಾಣಿಸಿಕೊಂಡು ಅವರೊಂದಿಗೆ ಬೆರೆಯುವುದೇ ನಿಜವಾದ 'ಥ್ಯಾಂಕ್ ಯು'. ನನ್ನ ಈ ಸಣ್ಣ ಮೋಜು-ಮಸ್ತಿಯ ನಂತರ ಆ ಸ್ಕೂಟಿಯನ್ನು ಅದರ ನೈಜ ವಿಜೇತರಿಗೆ ಹಸ್ತಾಂತರಿಸಲಾಯಿತು" ಎಂದು ಅವರು ಹೇಳಿದ್ದಾರೆ.


Click it and Unblock the Notifications
