ಏರ್‌ಪೋರ್ಟ್ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್ ಕಟ್ಟಬೇಕಿಲ್ಲ
ಬೆಂಗಳೂರು, ಜು.17: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಇರುವ ನವಯುಗ ಟೋಲ್ ನಲ್ಲಿ ಕೆಲ ದಿನಗಳ ಕಾಲ ಬಿಎಂಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹಿಸದಿರುವಂತೆ ತೀರ್ಮಾನ ಕೈಗೊಳ್ಳಲಾಗಿದೆ.
ನವಯುಗ ಟೋಲ್‌ನಲ್ಲಿ ಬಿಎಂಟಿಸಿ ಬಸ್‌ಗಳಿಗೆ ಹಳೆಯ ಶುಲ್ಕವನ್ನೇ ಮುಂದುವರೆಸುವ ಬಗ್ಗೆ ಚರ್ಚೆ ನಡೆಸಲಾಯಿತು, ಕೊನೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬಿಎಂಟಿಸಿ, ನವಯುಗ ಟೋಲ್, ಶಾಸಕರು ಹಾಗೂ ಪ್ರಯಾಣಿಕರ ನಡುವೆ ಸಭೆ ನಡೆಯಿತು.
ಈ ಸಭೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಆದರೆ ಟೋಲ್ ಹೆಚ್ಚಿದ ಕಾರಣ ಟಿಕೆಟ್‌ದರ ಹೆಚ್ಚಳ ಅನಿವಾರ್ಯ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು. ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಕಾರಣ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಟೋಲ್ ನಿರ್ವಹಣಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ, ಆದರೆ ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸುವಂತೆ ಅಲ್ಲಿಯವರೆಗೆ ಯಾವುದೇ ಶುಲ್ಕ ಪಡೆಯದಿರುವಂತೆ ಶಾಸಕರು ತಿಳಿಸಿದ್ದಾರೆ.
2018ರ ಮಾರ್ಚ್ ಬಳಿಕ ನವಯುಗ ಸಂಸ್ಥೆಯು ಟೋಲ್ ದರವನ್ನು ಹೆಚ್ಚಿಸಿತ್ತು. ಇದರಿಂದಾಗಿ ಬಿಎಂಟಿಸಿ ಸಂಸ್ಥೆಗೆ ಹೆಚ್ಚುವರಿ ಹೊರೆ ಬೀಳಲು ಆರಂಭವಾಯಿತು. ಟೋಲ್ ಮೂಲಕ ಸಾಗುವ ಬಸ್‌ಗಳಿಗೆ ಏಕಾಏಕಿ 6 ರೂ. ಏರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಹಾಗೂ ಬಿಎಂಟಿಸಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.












Click it and Unblock the Notifications