New year 2023: ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಿಂದ ಡಿ. 31ರ ಮಧ್ಯರಾತ್ರಿ 2ರವರೆಗೆ ಹೆಚ್ಚುವರಿ BMTC ಬಸ್‌ಗಳ ಸಂಚಾರ
ಬೆಂಗಳೂರು, ಡಿಸೆಂಬರ್, 30: ಹೊಸಹೊರ್ಷದ ಪ್ರಯುಕ್ತ ಡಿಸೆಂಬರ್ 31ರಂದು ಮಧ್ಯರಾತ್ರಿ 2ರ ವರೆಗೆ ಬಸ್ ಸೇವೆಗಳ ಸಮಯವನ್ನು ವಿಸ್ತರಿಸಲು ಬಿಎಂಟಿಸಿ ನಿರ್ಧಾರ ಮಾಡಿದೆ. ಬಿಎಂಟಿಸಿ ಬಸ್‌ಗಳು ಎಂಜಿ ರಸ್ತೆ, ಮತ್ತು ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ 13 ಹೆಚ್ಚುವರಿ ಬಸ್ ಸೇವೆಗಳನ್ನು ಕಲ್ಪಿಸಲಿದೆ.
ಬಸ್ ಸೇವೆಗಳು ಡಿಸೆಂಬರ್ 31, 2022ರ ಸಂಜೆಯಿಂದ ಮಧ್ಯಾರಾತ್ರಿ 2 ಗಂಟೆಯವರೆಗೆ ಇರಲಿವೆ. ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಜಿ2 ಸರ್ಜಾಪುರ ರಸ್ತೆ 4 ಟ್ರಿಪ್, ಜಿ4 ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್ 4 ಟ್ರಿಪ್, ಜಿ7 ಜನಪ್ರಿಯ ಟೌನ್‌ಶಿಪ್ 4, ಜಿ8 ನೆಲಮಂಗಲ 4 ಟ್ರಿಪ್, ಜಿ9 ಯಲಹಂಕ ನ್ಯೂ ಟೌನ್ 5ನೇ ಹಂತ 4 ಟ್ರಿಪ್, ಜಿ10 ಆರ್.ಕೆ.ಹೆಗಡೆ ನಗರ 3 ಟ್ರಿಪ್, ಜಿ 11 ಬಾಗಲೂರು 4 ಟ್ರಿಪ್, 317-ಜಿ ಹೊಸಕೋಟೆ 4, ಎಸ್‌ಬಿಎಸ್-13ಕೆ ಚನ್ನಸಂದ್ರಕ್ಕೆ 3 ಟ್ರಿಪ್‌ಗಳ ಸೇವೆಯನ್ನು ಕಲ್ಪಿಸಿದೆ, ಇನ್ನು ಬ್ರಿಗೇಡ್ ರೋಡ್‌ನಿಂದ ಜಿ3, ಎಲೆಕ್ಟ್ರಾನಿಕ್ ಸಿಟಿಗೆ 4 ಟ್ರಿಪ್, ಜಿ4 ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ 4 ಟ್ರಿಪ್ ಸಂಚಾರ ನಡೆಸಲಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆ ತಡರಾತ್ರಿ 2ಗಂಟೆ ರವರೆಗೆ ವಿಸ್ತರಿಸಿದೆ. ಇದರ ಬೆನ್ನಲ್ಲೇ ಬಿಎಂಟಿಸಿ ಕೂಡ ತಡರಾತ್ರಿ 2ಗಂಟೆ ರವರೆಗೆ ಸೇವೆ ಒದಗಿಸಲಿದೆ. 2022ರ ಡಿಸೆಂಬರ್ 31 ರಿಂದ ಜನವರಿ 202 ರ ಮಧ್ಯರಾತ್ರಿ 2 ಗಂಟೆವರೆಗೆ ಸಾರ್ವಜನಿಕರ ಓಡಾಟಕ್ಕೆ ಬಅff ಗಳ ವ್ಯವಸ್ಥೆ ಇರಲಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಂಜಿ ರೋಡ್ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರೋಡ್ ನಿಂದ ನಗರದ ವಿವಿಧ ಪ್ರದೇಶಗಳಿಗೆ ಒಟ್ಟು 50 ಬಸ್‌ಗಳ ವ್ಯವಸ್ಥೆ ಇರಲಿದೆ.

ಮುಂಜಾನೆ 2 ಗಂಟೆಯವರೆಗೆ ಸೇವೆ ಲಭ್ಯ
2023ರ ಹೊಸ ವರ್ಷಚಾರಣೆ ಪ್ರಯುಕ್ತ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಅವಧಿ ವಿಸ್ತರಣೆ ಮಾಡುತ್ತಿದೆ. ಜನವರಿ 1, 2023ರ ಮುಂಜಾನೆ 2 ಗಂಟೆಯವರೆಗೆ ಮೆಟ್ರೋ ಸಂಚಾರ ಇರಲಿದೆ. ಪ್ರತಿನಿತ್ಯ ರಾತ್ರಿ 11 ಗಂಟೆಯವರೆಗೆ ಸೇವೆ ನೀಡುತ್ತಿದ್ದ ನಮ್ಮ ಮೆಟ್ರೋ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ 3 ಗಂಟೆಗಳ ಕಾಲ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ ಮಾಡುತ್ತಿದೆ. 11:30 ರ ನಂತರ ಎಂ.ಜಿ.ರೋಡ್, ಟ್ರಿನಿಟಿ , ಕಬ್ಬನ್ ಪರ್ಕ್‌ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕಾಗದ ಟಿಕೆಟ್ ವಿಸ್ತರಣೆ ಮಾಡಲಿದೆ. ಹೀಗಾಗಿ ವಿಸ್ತರಿಸಿದ 3 ಗಂಟೆಗಳ ಅವಧಿಯಲ್ಲಿ ಟೋಕನ್ ವಿತರಣೆ ಇಲ್ಲ. ಜೊತೆಗೆ ಬಿಎಂಆರ್‌ಸಿಎಲ್ 50 ರೂಪಾಯಿ ಟಿಕೆಟ್ ನಿಗದಿ ಮಾಡಿದೆ.

ಡಿ. 31 ರ ರಾತ್ರಿ 8 ಗಂಟೆಯಿಂದಲೇ ಆರಂಭ
2 ಗಂಟೆಯವರೆಗೆ ಮೆಟ್ರೋ ಸಂಚಾರ ಅವಕಾಶವಿರುವ ನಿಲ್ದಾಣಗಳಿಂದ ಡಿಸೆಂಬರ್ 31 ರ ರಾತ್ರಿ 8 ಗಂಟೆಯಿಂದಲೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಲಭ್ಯವಿರಲಿದ್ದು, ಈ ನಿಲ್ದಾಣಗಳ ಮೂಲಕ ಸಂಚಾರ ಮಾಡಬಹುದು. ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ಪ್ರಯಾಣಿಕರು ಮೊದಲಿನಂತೆಯೇ ರಿಯಾಯಿತಿ ದರದಲ್ಲೇ ಪ್ರಯಾಣಿಸಬಹುದು. ಕಬ್ಬನ್ ಪಾರ್ಕ್, ಎಂ.ಜಿ.ರೋಡ್, ಟ್ರಿನಿಟಿ ಹೊರತುಪಡಿಸಿ ಯಾವುದೇ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಟೋಕನ್ ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಟಿಕೆಟ್ ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.

ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ
ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಿಗೆ ಡಿಸೆಂಬರ್ 31ರಂದು ಶನಿವಾರ ರಾತ್ರಿ ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಲ್ಲದೆ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಖಾಕಿ ಪಡೆ ನಿಗಾವಹಿಸಲಿದೆ. ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಸ್ತ್ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಹೆಚ್ಚಿನ ಜನರು ಸೇರಲಿದ್ದಾರೆ. ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷಗಳಿಂದ ಇಲ್ಲಿ ಸಾರ್ವಜನಿಕವಾಗಿ ಹೊಸವರ್ಷಾಚರಣೆಗೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ಬಾರಿ ಆಚರಣೆಗೆ ಅವಕಾಶ ಕೊಟ್ಟಿರುವ ಕಾರಣ ಹೆಚ್ಚಿನ ಜನರು ಸೇರಬಹುದು ಎಂದು ತಿಳಿಸಿದ್ದರು. ಸಂಭ್ರಮಾಚರಣೆಗೆ ಆಗಮಿಸುವ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಡಿಸೆಂಬರ್ 31ರಂದು ಸಂಜೆ ಎಂ.ಜಿ.ರಸ್ತೆಯ ಎರಡು ಬದಿಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳನ್ನು ಹಾಕಿ ಎಂ.ಜಿ.ರಸ್ತೆಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದಿದ್ದರು.












Click it and Unblock the Notifications