ಬೆಂಗಳೂರಲ್ಲಿ ಹೊಸ ನಗರ ಮೀಟರ್ ಆ್ಯಪ್, ಇನ್ಮುಂದೆ ಇಲ್ಲ ಕಿರಿಕಿರಿ!
ಬೆಂಗಳೂರಿನಲ್ಲಿ ಜನ ಆ್ಯಪ್ ಆಧಾರಿತ ಕ್ಯಾಬ್ ಹಾಗೂ ಆಟೋಗಳ ಮೇಲೆ ಅವಲಂಬಿತರಾಗಿರುವುದು ಹೆಚ್ಚು. ಓಲಾ ಹಾಗೂ ಊಬರ್ ಸೇರಿದಂತೆ ವಿವಿಧ ಕಂಪನಿಗಳಿಗೆ ಈಗಾಗಲೇ ರಾಜ್ಯ ಸರ್ಕಾರವೇ ದರ ನಿಗದಿ ಮಾಡಿದೆ. ಆದರೆ, ಈ ರೀತಿ ಇದ್ದರೂ ಕೆಲವರು ಮಳೆ ಬಂದರೆ ಒಂದು ರೀತಿ ಹಾಗೂ ಪೀಕ್ ಅವರ್‌ಗಳಲ್ಲಿ ಒಂದು ರೇಟ್ ಇರುವ ಬಗ್ಗೆ ಆಗಾಗ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿರುತ್ತವೆ. ಇನ್ನು ಬೆಂಗಳೂರಿನಲ್ಲಿ ಹೊಸ ಕಂಪನಿಗಳು ತಮ್ಮ ಸೇವೆಯನ್ನು ಪರಿಚಯಿಸುವುದು ಹೊಸದಲ್ಲ. ಈಗಾಗಲೇ ಆಟೋ ಚಾಲಕರೇ ಸೇರಿಕೊಂಡು ಹೊಸ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ನಗರ ಮೀಟರ್ ಆ್ಯಪ್. ಏನಿದರ ವಿಶೇಷ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇರುವ ಬಹುದೊಡ್ಡ ಸಮಸ್ಯೆ ಎಂದರೆ ಎಂಡ್ ಟು ಎಂಡ್ ಕನೆಕ್ಟಿವಿಟಿ ಇಲ್ಲದೆ ಇರುವುದು. ಅಂದರೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದಕ್ಕೆ ನಿಮಗೆ ಒಳ್ಳೆಯ ಹಾಗೂ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆ ಇದೆಯಾದರೂ, ಒಂದೇ ಸಾರಿಗೆ ವ್ಯವಸ್ಥೆಯಲ್ಲಿ ಹೋಗಲು ಕಷ್ಟ. ಬಸ್‌ನಲ್ಲೇ ಎಲ್ಲಾ ಕಡೆ ಹೋಗ್ತೀವಿ ಅನ್ನೋಕೆ ಆಗಲ್ಲ. ಮೆಟ್ರೋ ಸೇವೆ ಸಹ ಬೆಂಗಳೂರಿನ ಎಲ್ಲಾ ಪ್ರದೇಶಕ್ಕೂ ಹಾಗೂ ಎಲ್ಲಾ ಭಾಗದಲ್ಲೂ ವಿಸ್ತರಣೆ ಆಗಿಲ್ಲ. ಇದಕ್ಕಾಗಿ ನೀವು ಅನಿವಾರ್ಯವಾಗಿ ಬಸ್ ಅಥವಾ ಕ್ಯಾಬ್‌ಗಳನ್ನು ಅವಲಂಬಿಸಲೇಬೇಕು. ಇದನ್ನೇ ಕೆಲವು ಆಟೋ ಚಾಲಕರು ಹಾಗೂ ಕ್ಯಾಬ್ ಆ್ಯಪ್ ಗಳು ಬಂಡವಾಳವನ್ನಾಗಿಸಿಕೊಂಡಿವೆ. ತಮಗೆ ಇಷ್ಟ ಬಂದಂತೆ ದರ ನಿಗದಿ ಮಾಡಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿವೆ.

ಇದೀಗ ಈ ರೀತಿ ಜನರನ್ನು ಮೋಸ ಮಾಡುವವರಿಗೆ ಬುದ್ಧಿ ಕಲಿಸುವಂತೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಯುವಕರಿಬ್ಬರು ನಗರ ಮೀಟರ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ನಿರಂಜನ್ ಮತ್ತು ಶಿವು ಎನ್ನುವ ಯುವಕರು ಈ ವಿನೂತನ ನಗರ ಮೀಟರ್ ಆ್ಯಪ್ ಪರಿಚಯಿಸಿದ್ದು, ಗ್ರಾಹಕರಿಂದ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿದೆ. ಈ ಹೊಸ ನಗರ ಮೀಟರ್ ಆ್ಯಪ್‌ನ ಮೂಲಕ ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಚಾಲಕರು ಮೀಟರ್ ಹಾಕಿ ಗಾಡಿ ಓಡಿಸಬಹುದಾಗಿದೆ.
6,500 ಇನ್‌ಸ್ಟಾಲ್: ಇನ್ನು ಈ ಆ್ಯಪ್ ಪರಿಚಯಿಸಿದ ಕೆಲವೇ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಆ್ಯಪ್‌ನಿಂದಾಗಿ ಇನ್ಮುಂದೆ ಹೆಚ್ಚು ದರ ಪಡೆಯುವ ಕೆಲವರ ಮೋಸದ ಜಾಲಕ್ಕೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಆ್ಯಪ್ ಅನ್ನು ಈಗಾಗಲೇ ಬೆಂಗಳೂರಿನಾದ್ಯಂತ 6,500 ಕ್ಕೂ ಹೆಚ್ಚು ಆಟೋ ಚಾಲಕರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆರ್ಟಿಒ ನಿಯಮದ ಅನುಸಾರ ಈ ಆ್ಯಪ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರಯಾಣಿಕರಿಂದ ಹಣ ಪಡೆಯುತ್ತಿದೆ.
ರಾಜ್ಯ ಸರ್ಕಾರದಿಂದ ಅಗ್ರಿಗೇಟರ್ ಲೈಸೆನ್ಸ್ ಪಡೆಯುವ ಕಂಪನಿಗಳು ಆರ್ಟಿಒ ನಿಯಮದ ಅನುಸಾರ ಪ್ರಯಾಣಿಕರಿಂದ ದುಡ್ಡು ಪಡೆದುಕೊಳ್ಳಬೇಕು. ಆದರೆ, ಕೆಲವರು ಹೆಚ್ಚು ಹಣ ಪಡೆಯುತ್ತಿರುವ ಆರೋಪ ಇದೆ. ಅಲ್ಲದೇ ಇದನ್ನು ಪ್ರಶ್ನೆ ಮಾಡಿದರೆ ಕೋರ್ಟ್‌ನಿಂದ ಸ್ಟೇ ತರಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಈ ಆ್ಯಪ್ ಸಾರ್ವಜನಿಕರಿಗೆ ಹೊಸ ಅನುಕೂಲವನ್ನೇ ಮಾಡಲಿದೆ. ಉಳಿದ ಆ್ಯಪ್ ಆಧಾರಿತ ಕ್ಯಾಬ್ ಹಾಗೂ ಆಟೋಗಳಿಗೆ ಹೋಲಿಕೆ ಮಾಡಿದರೆ, ಈ ಆ್ಯಪ್ ನಲ್ಲಿ ಶೇ 25ರಷ್ಟು ಕಡಿಮೆ ಪಾವತಿ ಮಾಡಿದರೆ ಸಾಕು ಎಂದು ಹೇಳಲಾಗಿದೆ.












Click it and Unblock the Notifications