ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರ
ಬೆಂಗಳೂರು, ಮಾರ್ಚ್ 09: ಬೈಯಪ್ಪನಹಳ್ಳಿ - ವೈಟ್ ಫೀಲ್ಡ್ ನಡುವೆ ವಾರದೊಳಗೆ 2 ಹೊಸ ಮೆಮು ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ. ಮೆಟ್ರೋ ಕಾಮಗಾರಿಯಿಂದಾಗಿ ನಿತ್ಯ ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ಟೆಕ್ಕಿಗಳಿಗೆ ಈ ಸೇವೆ ಖುಷಿ ತರಲಿದೆ.
ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವೆ 2 ಮೆಮು ರೈಲು(ವಿದ್ಯುತ್ ಚಾಲಿತ) , ಬೈಯಪ್ಪನಹಳ್ಳಿ-ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಡುವೆ 2 ಮೆಮು ರೈಲು ಮತ್ತು ಹೊಸೂರು- ಬಾಣಸವಾಡಿ ನಡುವೆ 4 ಮೆಮು ರೈಲು ಸೇವೆಯನ್ನು ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ತಿಳಿಸಿದ್ದಾರೆ.
ಪ್ರಸತುತ 110 ಉಪನಗರ ರೈಲುಗಳು ಬೆಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.ಕಳೆದೊಂದು ವರ್ಷದಲ್ಲಿ 18 ಹೊಸ ಸೇವೆಯನ್ನು ಸೇರ್ಪಡೆಗೊಳಿಸಿದ್ದೇವೆ. ಇದೀಗ 8ಹೊಸ ರೈಲುಗಳನ್ನು ಶೀಘ್ರ ನೀಡಲಿದ್ದೇವೆ ಎಂದರು.
ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವೆ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿದೆ. 12.90 ಕೋಟಿ ರೂ ವೆಚ್ಚದಲ್ಲಿ ಮಾರ್ಗದಲ್ಲಿ ಬರುವ ನೀರಿನ ಕೊಳವೆಗಳ ತೆರವು ಕಾರ್ಯಾಚರಣೆ, ಸತ್ಯಸಾಯಿ ಆಸ್ಪತ್ರೆ ಬಳಿ ವಿದ್ಯುತ್ ಕಂಬಗಳ ತೆರವು ಕಾಮಗಾರಿ, ಹೂಡಿ ವೃತ್ತ, ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ, ಲೋವರಿ ಶಾಲಾ ಪ್ರದೇಶದಲ್ಲಿ ಮೆಟ್ರೋ ಪಿಲ್ಲರ್ ನಿರ್ಮಾಣ ಆರಂಭವಾಗಿದೆ.
ಮೊದಲೇ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ನಡುವಿನ ಮಾರ್ಗದಲ್ಲಿ ಹೆಚ್ಚಿನ ಮೆಮು ರೈಲು ಓಡಾಟಕ್ಕೆ ಆಗ್ರಹ ಕೇಳಿಬಂದಿತ್ತು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !