NEET Exam 2024: ನೀಟ್ ಫಲಿತಾಂಶದ ಸುತ್ತ ಅಕ್ರಮದ ಹುತ್ತ: ತನಿಖೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಜೂನ್ 07: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET 2024) ಒಂದೇ ರೀತಿಯಲ್ಲಿ ಅನೇಕ ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. 720ಕ್ಕೆ 720 ಅಂಕಗಳು ಬಂದಿವೆ. ಅಂದರೆ 100% ಅಂಕಗಳು ಬಂದಿದೆ. ಇದರಲ್ಲಿ ಅಕ್ರಮದ ವಾಸನೆ ಬರುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡಿದೆ.
ನೀಟ್ ಪರೀಕ್ಷೆ ಬಗ್ಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುಬಹದು ಎಂದು ಅವರು ಆರೋಪಿಸಿದ್ದಾರೆ.

ಈ ನೀಟ್ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳಿಗೆ ಶೇಕಡಾ 100 ಅಂಕಗಳು ಬಂದಿದೆ. ಆದರೆ ಈ ಹಿಂದೆ ಬಂದ ಟಾಪರ್‍ಗಳ ಸಂಖ್ಯೆ ಎಷ್ಟು? ಎಂಬುದನ್ನು ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಫಲಿತಾಂಶ ಬಗ್ಗೆ ಹಲವು ಅನುಮಾನಗಳು ಮೂಡುತ್ತವೆ
24 ಲಕ್ಷ ಪರೀಕ್ಷಾರ್ಥಿಗಳ ಭವಿಷ್ಯ ಮಣ್ಣುಪಾಲು?
ನೀಟ್ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಪರೀಕ್ಷೆಯನ್ನು 24 ಲಕ್ಷ ಯುವಜನರು ಬರೆದಿದ್ದರು. ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರವಾಗಲೀ ಉತ್ತರಿಸದೆ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದರು.
2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರೆ ಈ ವರ್ಷ 67 ವಿದ್ಯಾರ್ಥಿಗಳು ಟಾಪರ್‍ಗಳಾಗಿ ಹೊರ ಹೊಮ್ಮಿದ್ದಾರೆ.

ಇದು ಕೇಂದ್ರ ಸರ್ಕಾರದ ಹೊಸ ಪ್ರಯೋಗ?
ನೀಟ್ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯವೇ ಸರಿ. ಇದು ಕಾಕತಾಳೀಯವೋ ಅಥವಾ ಕೇಂದ್ರ ಸರ್ಕಾರದ ಹೊಸ ಪ್ರಯೋಗವೋ? ಎಂದು ಪ್ರಧಾನಿ ಮೋದಿಯವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನೀಟ್‌ನ 67 ಟಾಪರ್‌ಗಳಲ್ಲಿ 44 ಮಂದಿ 'ಗ್ರೇಸ್‌ಮಾರ್ಕ್' ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ.
ಗ್ರೇಸ್ ಅಂಕಗಳ ಆಧಾರದ ಮೇಲೆ ಇಷ್ಟೊಂದು ಪರೀಕ್ಷಾರ್ಥಿಗಳು ಟಾಪರ್‌ಗಳಾದಾಗ, "ಮಾರ್ಕಿಂಗ್ ಪ್ರಕ್ರಿಯೆ" ಮತ್ತು "ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಿಂಧುತ್ವ"ದ ಮೇಲೆ ಪ್ರಶ್ನೆ ಹುಟ್ಟು ಹಾಕುವುದಿಲ್ಲವೆ?
ನೀಟ್‌ನ 67 ಟಾಪರ್‌ಗಳಲ್ಲಿ 44 ಮಂದಿ 'ಗ್ರೇಸ್‌ಮಾರ್ಕ್' ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ.
— Siddaramaiah (@siddaramaiah) June 7, 2024
ಗ್ರೇಸ್ ಅಂಕಗಳ ಆಧಾರದ ಮೇಲೆ ಇಷ್ಟೊಂದು ಪರೀಕ್ಷಾರ್ಥಿಗಳು ಟಾಪರ್‌ಗಳಾದಾಗ, "ಮಾರ್ಕಿಂಗ್ ಪ್ರಕ್ರಿಯೆ" ಮತ್ತು "ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಿಂಧುತ್ವ"ದ ಮೇಲೆ ಪ್ರಶ್ನೆ ಹುಟ್ಟುಹಾಕುವುದಿಲ್ಲವೆ?
ಇನ್ನೊಂದು ಅಚ್ಚರಿಯ…
ನೀಟ್ ಟಾಪರ್‌ಗಳು ಒಂದೇ ಪರೀಕ್ಷಾ ಕೇಂದ್ರದವರು
ಅಚ್ಚರಿಯ ವಿಷಯವೇನೆಂದರೆ 62 ರಿಂದ 69 ರವರೆಗಿನ ಸರಣಿ ಸಂಖ್ಯೆಗಳೊಂದಿಗೆ ನೀಟ್ ಟಾಪರ್‌ಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು. ಈ ಪೈಕಿ 6 ಜನರು 720/720 ಅಂಕಗಳೊಂದಿಗೆ ನೀಟ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 718 ಮತ್ತು 719 ಅಂಕ ಪಡೆದವರು ನಂತರದ ಸ್ಥಾನದಲ್ಲಿದ್ದಾರೆ.

ಇದೆಲ್ಲ ನೋಡಿದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ನರೇಂದ್ರ ಮೋದಿ ಸರ್ಕಾರ ಮತ್ತು ಎನ್‌ಟಿಎ ಈ ಫಲಿತಾಂಶವನ್ನು ಸಮರ್ಥಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರ ಇದೇ ಚುನಾವಣಾ ಸೋಲಿನಿಂದಲೂ ಪಾಠ ಕಲಿತಿಲ್ಲ ಎಂದು ಕಾಲೆಳೆದರು.
ಯಾವ ಆಧಾರದಲ್ಲಿ 'ಗ್ರೇಸ್‌ಮಾರ್ಕ್' ನೀಡಿದ್ದೀರಿ?
ಫರಿದಾಬಾದ್‌ನ ನೀಟ್ ಪರೀಕ್ಷಾ ಕೇಂದ್ರದಲ್ಲಿ ತಪ್ಪು ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಳ್ಳವಂತಾಯಿತು. ಹಾಗಾಗಿ ಈ ಸಮಯಕ್ಕೆ ಪ್ರತಿಯಾಗಿ ಎನ್‌ಟಿಎ ಈ ಕೇಂದ್ರದ ಅಭ್ಯರ್ಥಿಗಳಿಗೆ 'ಗ್ರೇಸ್‌ಮಾರ್ಕ್' ನೀಡಿದೆ. ಇದು ನೂರು ಪ್ರತಿಶತ ಅಂಕ ಗಳಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಲಾಗಿದೆ.
"ಎನ್‌ಟಿಎ ಪ್ರಾಸ್ಪೆಕ್ಟಸ್", "ನೀಟ್ ಬ್ರೋಷರ್" ಮತ್ತು "ಸರ್ಕಾರಿ ಸೂಚನೆಗಳಲ್ಲಿ" ಈ ರೀತಿಯಲ್ಲಿ ಗ್ರೇಸ್ ಅಂಕಗಳನ್ನು ನೀಡುವ ಅವಕಾಶ ಇರುವ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಾದರೆ ಈ ಗ್ರೇಸ್ ಮಾರ್ಕ್‌ಗಳನ್ನು ಯಾವ ಆಧಾರದ ಮೇಲೆ ನೀಡಲಾಗಿದೆ? ಎಂದು ಅವರು ಪ್ರಶ್ನಿಸಿದರು.
ನೀಟ್ ಅಂಕಿ ಮಿತಿ 137 ಅಂಕದಿಂದ 164ಕ್ಕೆ ಏರಿಕೆ
2019 ರಿಂದ 2023 ರವರೆಗೆ, ನೀಟ್ ಪರೀಕ್ಷೆಯಲ್ಲಿ 600 ಅಂಕಗಳನ್ನು ಗಳಿಸಿದವರು ಕೈಗೆಟುಕುವ ಶುಲ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಲಭವಾಗಿ ಪ್ರವೇಶ ಪಡೆದಿದ್ದರು. ಈ ವರ್ಷ ನೀಟ್ ಪರೀಕ್ಷೆಯ ಅಂಕಮಿತಿಯು 137 ಅಂಕಗಳಿಂದ 164 ಕ್ಕೆ ಏರಿಕೆಯಾಗಿದೆ.
ನಿಗದಿತ ವೇಳಾಪಟ್ಟಿಯಂತೆ ನೀಟ್ ಪರೀಕ್ಷೆಯನ್ನು 2024 ಮೇ 5 ರಂದು ನಡೆಸಲಾಯಿತು ಮತ್ತು ಅದರ ಫಲಿತಾಂಶವು ಜೂನ್ 14ರಂದು ಪ್ರಕಟವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಫಲಿತಾಂಶವನ್ನು ಜೂನ್ 4 ರಂದು ಪ್ರಕಟಿಸಲಾಗಿದೆ. ಇದೇ ದಿನ ದೇಶದ ಸಂಸತ್ ಚುನಾವಣೆಯ ಫಲಿತಾಂಶ ಬಂದಿದ್ದು, ಇಡೀ ದೇಶವೇ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಕೇಳುವುದರಲ್ಲಿ ನಿರತವಾಗಿತ್ತು.
ಚುನಾವಣೆ ವೇಳೆ ಫಲಿತಾಂಶ ಬಿಡುಗಡೆಯ ತರಾತುರಿ
ಈ ಗದ್ದಲದಲ್ಲಿ ನೀಟ್ ಫಲಿತಾಂಶವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದ್ದು, ಪರೀಕ್ಷೆಯ ಅಕ್ರಮಗಳನ್ನು ಮುಚ್ಚಿಹಾಕಬಹುದು ಎಂಬ ಕಾರಣಕ್ಕಾಗಿಯೇ?. ಇದಲ್ಲದಿದ್ದರೆ ನರೇಂದ್ರ ಮೋದಿ ಸರ್ಕಾರ ತರಾತುರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು ಯಾಕೆ? ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಮಾಡಿರುವ ಯಡವಟ್ಟಿನಿಂದಾಗಿ ನೀಟ್ ಫಲಿತಾಂಶ ಪ್ರಕಟವಾದ ನಂತರ ದೌಸಾದಲ್ಲಿ ಅಜಿತ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ರೇವಾ ಯುವತಿ ಬಗೀಶಾ ತಿವಾರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬರೀ ವಿವಾದಗಳಿಂದಲೇ ತುಂಬಿರುವ ಮತ್ತು ಯುವಜನರು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿರುವ ಎನ್‌ಟಿಎಯ ನೀಟ್ ಪರೀಕ್ಷಾ ವ್ಯವಸ್ಥೆ ನಿಜಕ್ಕೂ ಎಂತಹದ್ದು ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮೋದಿಯವರ ಸರ್ಕಾರ ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ಮತ್ತಷ್ಟು ಯುವ ಜನರು ಪ್ರಾಣ ಕಳೆದುಕೊಳ್ಳುವ ಮುನ್ನ ಪರೀಕ್ಷಾ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನೊಂದ ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಬೇಕು ಎಂದು ತಿಳಿಸಿದರು.












Click it and Unblock the Notifications