ಬಿಜೆಪಿಗೆ ಶಕ್ತಿ ತುಂಬಿದ ಬೆಂಗಳೂರಲ್ಲಿ ಮೋದಿ ರೋಡ್ ಶೋ
ಬೆಂಗಳೂರು, ಮೇ 14; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ರಾಜ್ಯದ ಆಡಳಿತ ಪಕ್ಷ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ಗೆಲುವು ಸಾಧಿಸಿರುವ 66 ಕ್ಷೇತ್ರಗಳಲ್ಲಿ ಬೆಂಗಳೂರು ನಗರದದ್ದು ದೊಡ್ಡ ಪಾಲಿದೆ. ನಗರದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 12 ಮತ್ತು ಬಿಜೆಪಿ 16 ಸ್ಥಾನಗಳನ್ನು ಪಡೆದಿವೆ. ಜೆಡಿಎಸ್‌ಗೆ ಒಂದೇ ಒಂದು ಸ್ಥಾನವೂ ಸಿಕ್ಕಿಲ್ಲ.
ಬೆಂಗಳೂರು ನಗರದ ಮೇಲೆ ಬಿಜೆಪಿಯ ಪ್ರಾಬಲ್ಯ ಮುಂದುವರೆದಿದೆ. ಪದ್ಮನಾಭನಗರ ಆರ್. ಅಶೋಕ, ಬಸವನಗುಡಿ ರವಿ ಸುಬ್ರಮಣ್ಯ, ರಾಜಾಜಿನಗರ ಸುರೇಶ್ ಕುಮಾರ್, ಮಲ್ಲೇಶ್ವರ ಡಾ. ಸಿ. ಎನ್. ಅಶ್ವತ ನಾರಾಯಣ್ ಹೀಗೆ ಹಲವು ಪ್ರಮುಖ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಗೆಲುವಿನ ಓಟ ಮುಂದುವರೆಸಿದ್ದಾರೆ.

ಬಿಜೆಪಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಪ್ರಮುಖ ಪಾತ್ರವಹಿಸಿದೆ. ಮೋದಿ ನಗರದಲ್ಲಿ 3 ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ್ದರು. ಸುಮಾರು 37 ಕಿ. ಮೀ. ಅವರು ಸಂಚಾರ ನಡೆಸಿದ್ದರು. ಅದರಲ್ಲೂ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಮೊದಲು ಮೇ 6 ಮತ್ತು 7ರಂದು ನಗರದಲ್ಲಿ ಎರಡು ದಿನ ಒಟ್ಟಿಗೆ ರೋಡ್ ಶೋ ನಡೆಸಿದ್ದರು.
ಮೆಗಾ ರೋಡ್ ಶೋ; ಏಪ್ರಿಲ್ 29 ರಂದು ನರೇಂದ್ರ ಮೋದಿ ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್ ತನಕ ರೋಡ್ ಶೋ ಮಾಡಿದ್ದರು. ಅಪಾರ ಜನಸ್ತೋಮ ಈ ರೋಡ್ ಶೋಗೆ ಸಾಕ್ಷಿಯಾಗಿತ್ತು. ಜನರು ಹೂ ಮಳೆ ಸುರಿಸುವ ಮೂಲಕ, ಮೋದಿ ಮೋದಿ ಎಂದು ಘೋಷಣೆ ಮಾಡುವ ಮೂಲಕ ಮೋದಿಯನ್ನು ಸ್ವಾಗತಿಸಿದ್ದರು.

ಬಳಿಕ ಮೇ 6ರ ಶನಿವಾರ ನರೇಂದ್ರ ಮೋದಿ ಸುಮಾರು 28 ಕಿ. ಮೀ. ರೋಡ್ ಶೋ ನಡೆಸಿದ್ದರು. ಜೆ. ಪಿ. ನಗರದ ಬಳಿ ಆರಂಭವಾದ ರೋಡ್ ಶೋ, ಮಲ್ಲೇಶ್ವರ ಕಾಡು ಮಲ್ಲೇಶ್ವರ ದೇವಾಲಯ ತನಕ ನಡೆದಿತ್ತು. ನಗರದ ಸುಮಾರು 13 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಅವರು ಪ್ರಚಾರ ನಡೆಸಿದ್ದರು. ಬಳಿಕ ಮೇ 7ರಂದು ಸಿ. ವಿ. ರಾಮನ್ ನಗರದಿಂದ ಬ್ರಿಗೇಡ್ ರಸ್ತೆಯ ತನಕ ರೋಡ್ ಶೋ ಮಾಡಿದ್ದರು.
ನರೇಂದ್ರ ಮೋದಿ ರೋಡ್ ಶೋ ನಡೆದಿದ್ದ ಕೆ. ಆರ್. ಪುರ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಸಿ. ವಿ. ರಾಮನ್ ನಗರ, ರಾಜಾಜಿನಗರ, ಚಿಕ್ಕಪೇಟೆ, ಬಸವನಗುಡಿ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಪುನರಾಯ್ಕೆಗೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಬೆಂಗಳೂರು ನಗರದಲ್ಲಿ ರೋಡ್ ಶೋ ನಡೆಸಿದ್ದರು. ವಿ. ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತಲಾ ಒಂದು ಸ್ಥಾನ ಕಸಿದುಕೊಂಡಿದೆ.
2018ರ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಬಿಜೆಪಿ 11, ಕಾಂಗ್ರೆಸ್ 15, ಜೆಡಿಎಸ್ 2 ಕಡೆ ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ನಾಲ್ವರು ಮತ್ತು ಜೆಡಿಎಸ್‌ನ ಇಬ್ಬರು ಬಿಜೆಪಿಗೆ ಬಂದಿದ್ದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 16, ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬೆಂಗಳೂರು ನಗರದ ಕ್ಷೇತ್ರವನ್ನು ಹಂಚಿಕೊಂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ಒಟ್ಟು 36 ಸ್ಥಾನಗಳಲ್ಲಿ ಜೆಡಿಎಸ್ ಗೆದ್ದಿರುವುದು ಕೇವಲ 1 ಕ್ಷೇತ್ರ (ಚನ್ನಪಟ್ಟಣ- ಎಚ್. ಡಿ. ಕುಮಾರಸ್ವಾಮಿ).












Click it and Unblock the Notifications