Nandini: ಬೆಂಗಳೂರು ಇಂದಿರಾ ಕ್ಯಾಂಟೀನ್ ಆವರಣದ 10x10 ಜಾಗದಲ್ಲಿ ಬಮೂಲ್ ಮಳಿಗೆಗಳು ಆರಂಭ
ಬೆಂಗಳೂರು: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗುರುತಿಸಿರುವ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ನಂದಿನಿ ಹಾಲಿನ ಮಳಿಗೆಗಳು ತಲೆ ಎತ್ತಲಿವೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಲಿಮಿಟೆಡ್ (ಬಮುಲ್) ಮನವಿ ಮೇರೆಗೆ 10x10 ಜಾಗದಲ್ಲಿ ಮಳಿಗೆ ಸ್ಥಾಪನಗೆ ಗುತ್ತಿಗೆ ಆಧಾರದಲ್ಲಿ ಅವಕಾಶ ಮಾಡಿಕೊಡುತ್ತಿದೆ.
ಇಂದಿರಾ ಕ್ಯಾಂಟೀನ್ ಆವರಣದ ಅಂದಾಜು 100 ಚದರ ಅಡಿ ವಿಸ್ತೀರ್ಣದಲ್ಲಿ ಬಮೂಲ್ ವತಿಯಿಂದ ನಂದಿನ ಔಟ್‌ಲೆಟ್‌ಗಳು ಶೀಘ್ರವೇ ಆರಂಭಗೊಳ್ಳಲಿವೆ. ಸರ್ಕಾರ ಮತ್ತು ಬಮೂಲ್ ನಡುವೆ ಐದು ವರ್ಷದ ಗುತ್ತಿಗೆ ಒಪ್ಪಂದವಾಗಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಗುಣಮಟ್ಟ ಇನ್ನಿತರ ಕಾರಣಗಳಿಂದಾಗಿ ಇಂದಿರಾ ಕ್ಯಾಂಟೀನ್‌ಗೆ ಆಗಮಿಸುವ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜಾಗ ಸದ್ಭಳಕೆ ಆಗಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

79 ಕ್ಯಾಂಟೀನ್ ಆವರಣದಲ್ಲಿ ಜಾಗ ಫೈನಲ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಡಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್ ಗಳಲ್ಲಿ 79 ಕ್ಯಾಂಟೀನ್ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಇತರ ಕಡೆಗಳಲ್ಲಿ ಸುಮಾರು 100ಕ್ಕೂ ಅಧಿಕ ಖಾಲಿ ನಿವೇಶನ ನೀಡುವಂತೆ ಬಮೂಲ್ ಜಿಬಿಎಗೆ ಕೋರಿದೆ. ಶೀಘ್ರವೇ ಆ ಜಾಗಗಳು ಗುರುತಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ನಂದಿನಿ ಔಟ್‌ಲೆಟ್‌ಗಳು ನಗರಾದ್ಯಂತ ವಿಸ್ತರಣೆ ಆಗಲಿವೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಒಂದರಲ್ಲೇ ಸುಮಾರು 18 ಕ್ಯಾಂಟೀನ್‌ಗಳಲ್ಲಿ ಜಾಗ ಗುರುತಿಸಲಾಗಿದೆ. ಇನ್ನುಳಿದಂತೆ ಕಬ್ಬನ್ ಪಾರ್ಕ್ ಬಳಿ ಸೇರಿ ಇತರ ಪ್ರತ್ಯೇಕ ಕಡೆಗಳಲ್ಲಿ ತಲಾ ಒಂದೊಂದು ಖಾಲಿ ಜಾಗವನ್ನು ಪಾಲಿಕೆ ಗುರುತಿಸಿದೆ. ಎಲ್ಲ ಕ್ಯಾಂಟೀನ್‌ಗಳ ಜಾಗಗಳಿಗೆ ಬಾಡಿಗೆ ಒಂದೇ ತೆರನಾಗಿ ಇರುವುದಿಲ್ಲ. ಜಾಗದ ಆಧಾರದಲ್ಲಿ ಬಾಡಿಗೆ ಹಣ ನಿಗದಿ ಆಗಲಿದೆ.
ಕ್ಯಾಂಟೀನ್ ಜಾಗದ ಆಧಾರದಲ್ಲಿ ಬಾಡಿಗೆ ನಿಗದಿ
ಅಶೋಕ್ ನಗರ ಕ್ಯಾಂಟೀನ್‌ನಲ್ಲಿ 100 ಚದರ ಅಡಿ ಜಾಗಕ್ಕೆ ಮಾಸಿಕ ಸುಮಾರು 2000 ರೂ.ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಅಷ್ಟೇ ಜಾಗಕ್ಕೆ 7,031 ರೂಪಾಯಿ ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಾರ್ವಜನಿಕರಿಗೆ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡುವ ಪ್ಲ್ಯಾನ್ ಇದಾಗಿದೆ. ಬಮೂಲ್ ಸಂಸ್ಥೆಯು ಹದಿನೈದು ವರ್ಷಗಳ ಗುತ್ತಿಗೆ ಕೇಳಿದೆ. ಸದ್ಯ ಪ್ರಸ್ತಾವನೆ ಪರಿಶೀಲಿಸಿ ಗುತ್ತಿಗೆ ಅವಧಿ ಕಡಿಮೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸದಾಗಿ ಜಾಗ ಹುಡುಕುವ ಬದಲಾಗಿ ಇರುವ ಕ್ಯಾಂಟೀನ್ ಆವರಣದ ಜಾಗದಲ್ಲೇ ನಿರ್ಮಿಸಲಾಗುತ್ತಿದೆ. ಇನ್ನೂ ಇಂದಿರಾ ಕ್ಯಾಂಟೀನ್‌ಗಳು ದಿನವೊಂದಕ್ಕೆ ಸಾಮಾನ್ಯವಾಗಿ ಕೆಲವೇ (3 ಗಂಟೆ) ಗಂಟೆಗಳ ಮಾತ್ರ ಓಪನ್ ಆಗಿರುತ್ತವೆ. ಇಲ್ಲಿ ಬಮೂಲ್ ಮಳಿಗೆ ತೆರೆದರೆ ಹೆಚ್ಚು ಜನರನ್ನು ಸೆಳೆಯಬಹುದು ಎಂದು ಯೋಚಿಸಲಾಗಿದೆ.


Click it and Unblock the Notifications
