ಡಿಸೆಂಬರ್‌ನಲ್ಲಿ ಓಡಲಿದೆಯೇ ಹಳದಿ ಮಾರ್ಗದ ನಮ್ಮ ಮೆಟ್ರೋ?
ಬೆಂಗಳೂರು, ಮೇ 12: ಈಗಾಗಲೇ ಹಲವು ಗಡುವು ಮಗಿದ ಬಳಿಕ ಅಂತಿಮವಾಗಿ ಕೋಲ್ಕತ್ತಾ ಮೂಲದ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಬಿಎಂಆರ್‌ಸಿಎಲ್‌ಗೆ ಆಗಸ್ಟ್ 2024ರಲ್ಲಿ ಮೆಟ್ರೋ ಬೋಗಿಯನ್ನು ಪೂರೈಕೆ ಮಾಡಲಿದೆ.
ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಯೋಜನೆ ಅನುಷ್ಠಾನಗೊಳಿಸುತ್ತಿರುವ ಬಿಎಂಆರ್‌ಸಿಎಲ್ ಈ ರೈಲು ಬೋಗಿಯನ್ನು ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ)ದಲ್ಲಿ ಓಡಿಸಲು ತೀರ್ಮಾನಿಸಿದೆ. ಈ ಮೂಲಕ ಹಳದಿ ಮಾರ್ಗದಲ್ಲಿ ರೈಲು ಪ್ರಾಥಮಿಕ ಪರೀಕ್ಷೆಗಳು ಆರಂಭವಾಗಲಿವೆ.

ಕೋಲ್ಕತ್ತಾ ಸಮೀಪ ಇರುವ ಘಟಕದಲ್ಲಿ ಮೇ 10ರಂದು 6 ಬೋಗಿಯ ನಮ್ಮ ಮೆಟ್ರೋ ರೈಲು ತಯಾರಿಕಾ ಕಾರ್ಯ ಆರಂಭವಾಗಿದೆ. ಬಿಎಂಆರ್‌ಸಿಎಲ್‌ಗೆ ಬೋಗಿ ಪೂರೈಕೆ ಟೆಂಡರ್ ಪಡೆದಿರುವ ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಭಾರತದ ತನ್ನ ಪಾಲುದಾರ ಟಿಆರ್‌ಎಸ್‌ಎಲ್‌ಗೆ ಎರಡು ಬೋಗಿಯನ್ನು ನೀಡಿದೆ.
ಪ್ರಾಯೋಗಿಕ ಸಂಚಾರ ಯಾವಾಗ?; ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಟಿಆರ್‌ಎಸ್‌ಎಲ್ ಆಗಸ್ಟ್ 2024 ರಿಂದ ಫೆಬ್ರವರಿ 2025ರ ನಡುವೆ 14 ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ಹಳದಿ ಮಾರ್ಗದ ಕಾರ್ಯಾಚರಣೆಗಾಗಿ ನೀಡಲಿದೆ.
ಟಿಆರ್‌ಎಸ್‌ಎಲ್ ತನ್ನ ವಿನ್ಯಾಸ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಸಿಆರ್‌ಆರ್‌ಸಿ ಪರೀಕ್ಷೆಯನ್ನು ನಡೆಸಲಿದೆ. ಬಳಿಕ ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರ ಮಾಡಲಾಗುತ್ತದೆ. 19 ಕಿ. ಮೀ. ಆರ್. ವಿ. ರಸ್ತೆ-ಬೊಮ್ಮಸಂದ್ರ ನಮ್ಮ ಮೆಟ್ರೋ ಮಾರ್ಗ 2021ರಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ಗಡುವನ್ನು 2024ರ ಡಿಸೆಂಬರ್‌ಗೆ ವಿಸ್ತರಣೆ ಮಾಡಲಾಯಿತು.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮಹತ್ವದ ಮೆಟ್ರೋ ಮಾರ್ಗ ಇದಾಗಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ಸುಮಾರು 4 ಲಕ್ಷ ಪ್ರಯಾಣಿಕರು ಪ್ರತಿದಿನ ಸಂಚಾರ ನಡೆಸುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು ಮುಗಿದಿವೆ. ಆದರೆ ಬೋಗಿಗಳು ಬರುವ ತನಕ ರೈಲು ಸಂಚಾರ ನಡೆಸುವಂತಿಲ್ಲ.
ಒಟ್ಟು 6 ಬೋಗಿಗಳ ಸಹಾಯದಿಂದ 2024ರ ಡಿಸೆಂಬರ್‌ನಲ್ಲಿ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿದೆ. ಸುಮಾರು 15 ನಿಮಿಷದ ಅಂತರದಲ್ಲಿ ರೈಲುಗಳನ್ನು ಓಡಿಸಬಹುದು ಎಂದು ಅಂದಾಜಿಸಲಾಗಿದೆ. 2025ರ ಫೆಬ್ರವರಿ ವೇಳೆಗೆ ಮತ್ತಷ್ಟು ಬೋಗಿಗಳು ಬಂದು ಸೇರಲಿವೆ.
ಮೇ 2024ರ ಅಂತ್ಯದಲ್ಲಿ ಬಿಎಂಆರ್‌ಸಿಎಲ್ ಚೀನಾದಿಂದ ಬಂದಿರುವ ಚಾಲಕ ರಹಿತ ಮೆಟ್ರೋ ಬೋಗಿ ಮೂಲಕ ಪ್ರಾಯೋಗಿಕ ಸಂಚಾರವನ್ನು ಹಳದಿ ಮಾರ್ಗದಲ್ಲಿ ಆರಂಭಿಸಲಿದೆ. 36 ರೌಂಡ್‌ಗಳ ಪರೀಕ್ಷೆ ಬಳಿಕ ಎಲ್ಲಾ ಪರೀಕ್ಷೆಗಳು ಸೆಪ್ಟೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಆದರೆ ರೈಲುಗಳ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ (ಸಿಎಂಆರ್‌ಎಸ್) ಅನುಮತಿ ಅಗತ್ಯವಿದೆ. ಅಕ್ಟೋಬರ್‌ನಲ್ಲಿ ಸಿಎಂಆರ್‌ಎಸ್ ಪರೀಕ್ಷೆಗೆ ತಂಡವನ್ನು ಬಿಎಂಆರ್‌ಸಿಎಲ್ ಆಹ್ವಾನಿಸಲಿದೆ. ಈ ಪರೀಕ್ಷೆ ಮುಗಿದು ಡಿಸೆಂಬರ್ ಅಂತ್ಯಕ್ಕೆ ರೈಲು ಸಂಚಾರ ನಡೆಸುವ ನೀರಿಕ್ಷೆ ಇದೆ.
173 ವಾರದಲ್ಲಿ 216 ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ನೀಡುವುದಾಗಿ 2019ರ ಡಿಸೆಂಬರ್‌ನಲ್ಲಿ ಸಿಆರ್‌ಆರ್‌ಸಿ ಟೆಂಡರ್ ಪಡೆದಿತ್ತು. 216ರ ಪೈಕಿ 126 ಬೋಗಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಉಳಿದ ಬೋಗಿ ಹಳದಿ ಮಾರ್ಗದಲ್ಲಿ ಬಳಕೆ ಮಾಡಲಾಗುತ್ತದೆ.
ಟೆಂಡರ್ ನೀಡುವಾಗಲೇ ಸ್ಥಳೀಯ ಉತ್ಪಾದಕರ ಜೊತೆ ಸೇರಿ ಬೋಗಿ ತಯಾರು ಮಾಡಬೇಕು ಎಂದು ಷರತ್ತು ಹಾಕಲಾಗಿತ್ತು. ಆದರೆ ಭಾರತದಲ್ಲಿ ಉತ್ಪಾದಕರನ್ನು ಗುರುತಿಸಲು ವಿಫಲವಾದ ಸಿಆರ್‌ಆರ್‌ಸಿ ಅಂತಿಮವಾಗಿ ಕೋಲ್ಕತ್ತಾ ಮೂಲದ ಟಿಆರ್‌ಎಸ್‌ಎಲ್ ಜೊತೆ ಸೇರಿ ಬೋಗಿಯನ್ನು ನಿರ್ಮಾಣ ಮಾಡಲು ಆರಂಭಿಸಿದೆ.












Click it and Unblock the Notifications