Namma Metro: ಮೆಟ್ರೋ ಹಳದಿ ಮಾರ್ಗ, 6 ನಿಲ್ದಾಣದಲ್ಲಿ ಮಾತ್ರ ರೈಲು ನಿಲುಗಡೆ
ಬೆಂಗಳೂರು, ಏಪ್ರಿಲ್ 14: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ. 'ಹಳದಿ' ಮಾರ್ಗದಲ್ಲಿ ರೈಲು ಸಂಚಾರ ಯಾವಾಗ ಆರಂಭ? ಎಂದು ಜನರು ಪ್ರಶ್ನಿಸುತ್ತಲೇ ಇದ್ದಾರೆ. ಮೇ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ನಗರದ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಮಾರ್ಗ ಇದಾಗಿದೆ. ಆದರೆ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲುಗಳ ಕೊರತೆ ಇದೆ.
ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪೂರ್ಣವಾಗಿ ಆರಂಭಿಸಲು 90 ಬೋಗಿಯ 15 ರೈಲುಗಳ ಅಗತ್ಯವಿದೆ. ಆದರೆ ಸದ್ಯ 6 ಬೋಗಿಯ ಎರಡು ರೈಲುಗಳಿವೆ. ಏಪ್ರಿಲ್ 25ರ ವೇಳೆಗೆ 3ನೇ ರೈಲು ಬೆಂಗಳೂರು ನಗರಕ್ಕೆ ಆಗಮಿಸಲಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಬಳಿಕ ಮೇ ಅಂತ್ಯಕ್ಕೆ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಮೇ ಅಂತ್ಯಕ್ಕೆ ತಲಾ 6 ಬೋಗಿಯ ಮೂರು ರೈಲುಗಳ ಮೂಲಕ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿದೆ. ಪ್ರತಿ 20 ನಿಮಿಷಕ್ಕೆ ಒಂದು ರೈಲು ಓಡಿಸಲಾಗುತ್ತದೆ. ಆದರೆ ಈ ಕಾರ್ಯಾಚರಣೆ ಯೋಜನೆ ಅನ್ವಯ ಸೀಮಿತ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡಲಾಗುತ್ತದೆ.
ಯಾವ-ಯಾವ ನಿಲ್ದಾಣಗಳು?: ಹಳದಿ ಮೆಟ್ರೋ ಯೋಜನೆಯ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ 18.8 ಕಿ. ಮೀ. ಉದ್ದವಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. ಈಗಾಗಲೇ ಈ ಮಾರ್ಗದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಮೇ ತಿಂಗಳ ಅಂತ್ಯದಲ್ಲಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಈಗಾಗಲೇ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿರುವ ಟಿಟಾಗರ್ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್‌ಎಸ್‌ಎಲ್) ಏಪ್ರಿಲ್ 25ಕ್ಕೆ ಮತ್ತೊಂದು ಬೋಗಿಯನ್ನು ನೀಡುವ ನಿರೀಕ್ಷೆ ಇದ್ದು, ಇದು ಮೇ 15ರೊಳಗೆ ನಗರಕ್ಕೆ ಆಗಮಿಸಲಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಗೆ (ಸಿಎಂಆರ್‌ಎಸ್) ಪರಿಶೀಲನೆ ಮುಗಿದ ಬಳಿಕ ಮೇ ಅಂತ್ಯಕ್ಕೆ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಮಾಹಿತಿಗಳ ಪ್ರಕಾರ 20 ನಿಮಿಷಕ್ಕೆ ಒಂದು ರೈಲು ಓಡಲಿದೆ. ಆದರೆ ಈ ರೈಲುಗಳು ಆರ್. ವಿ. ರಸ್ತೆ, ಜಯದೇವ, ಸಿಲ್ಕ್‌ಬೋರ್ಡ್, ಇನ್ಫೋಸಿಸ್, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರದಲ್ಲಿ ಮಾತ್ರ ನಿಲುಗಡೆಗೊಳ್ಳಲಿದೆ. ಜೂನ್ ಅಥವ ಜುಲೈ ಅಂತ್ಯಕ್ಕೆ 4ನೇ ರೈಲು ಟಿಆರ್‌ಎಸ್‌ಎಲ್‌ನಿಂದ ಆಗಮಿಸಲಿದ್ದು, ಬಳಿಕ ಬೇರೆ ಬೇರೆ ನಿಲ್ದಾಣಗಳಲ್ಲಿ ರೈಲು ನಿಲ್ಲಿಸಲಾಗುತ್ತದೆ.
ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸಲು ಬೋಗಿಗಳ ಕೊರತೆ ಇದೆ. ಬೋಗಿಗಳ ತಯಾರಿಗೆ ಚೀನಾ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಅದು ಪಶ್ಚಿಮ ಬಂಗಾಳದ ಟಿಟಾಗರ್ ಜೊತೆ ಸೇರಿಕೊಂಡು ಬೋಗಿಯನ್ನು ನಿರ್ಮಾಣ ಮಾಡುತ್ತಿದೆ. ಕಂಪನಿ ಈಗಾಗಲೇ 6 ಬೋಗಿಯ ಎರಡು ರೈಲುಗಳನ್ನು ಪೂರೈಕೆ ಮಾಡಿದ್ದು, ಈ ತಿಂಗಳು ಮತ್ತೊಂದು ರೈಲು ನೀಡುವ ಭರವಸೆಯನ್ನು ಕೊಟ್ಟಿದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮಾತನಾಡಿ, "ಮೇ ಅಂತ್ಯದ ವೇಳೆಗೆ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ಮಾರ್ಗದ ಪರಿಶೀಲನೆಗಾಗಿ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರವನ್ನು ಬರೆಯಲಾಗುತ್ತದೆ" ಎಂದು ಹೇಳಿದ್ದಾರೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ ಹಸಿರು ಮತ್ತು ಪಿಂಕ್ ಮಾರ್ಗಕ್ಕೆ ಸಂಪರ್ಕವನ್ನು ಸಹ ಕಲ್ಪಿಸುತ್ತದೆ. ಅಲ್ಲದೇ ಈ ಮಾರ್ಗದಲ್ಲಿ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಈ ಮಾರ್ಗದ ವಿಶೇಷತೆ ಎಂದರೆ ಚಾಲಕ ರಹಿತ ಮೆಟ್ರೋ ರೈಲನ್ನು ಬಿಎಂಆರ್‌ಸಿಎಲ್ ಓಡಿಸಲಿದೆ.












Click it and Unblock the Notifications