Bengaluru Metro: ನಮ್ಮ ಮೆಟ್ರೋ ಹಳದಿ ಮಾರ್ಗ ಜನವರಿಗೂ ಈ ಕಾರಣಕ್ಕೆ ತೆರೆಯುವುದು ಡೌಟ್!
ಬೆಂಗಳೂರು, ಡಿಸೆಂಬರ್ 10: ಬೆಂಗಳೂರು ಮಟ್ರೋ ಮಾರ್ಗಗಳ ಪೈಕಿ ಐಟಿ ಕಂಪನಿಗಳ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕಿಸುವ ಹಳದಿ ಮಾರ್ಗದ (Namma Metro Yellow Line) ಕಾರ್ಯಾಚರಣೆಯು ಮತ್ತೆ ವಿಳಂಬವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. 2025ರ ಜನವರಿ ಅಂತ್ಯಕ್ಕೆ ಅಂದುಕೊಂಡಂತೆ ಸಂಚಾರ ಆರಂಭಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಹೌದು, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಸುಮಾರು 20 ಕಿಲೋ ಮೀಟರ್ ಉದ್ದದ ಮತ್ತು ಹೊಸದಾಗಿ ನಿರ್ಮಿಸಿರುವ ನಮ್ಮಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮೇಲಿಂದ ಮೇಲೆ ತೊಡಕುಗಳು, ವಿಘ್ನಗಳು ಎದುರಾಗುತ್ತಿವೆ.

ನಿರ್ಮಾಣ ಕಾರ್ಯ ಎಲ್ಲವು ಮುಗಿದ ಬಳಿಕ 2024ರ ಫೆಬ್ರವರಿಗೆ ಕಾರ್ಯಾಚರಣೆ ಆರಂಭಿಸಬೇಕಿದ್ದ ಹಳದಿ ಮಾರ್ಗದಲ್ಲಿ ರೈಲುಗಳ ಓಡಾಟ ಬರೋಬ್ಬರಿ ಒಂದು ವರ್ಷ ವಿಳಂಬವಾಗಿದೆ. ಮೆಟ್ರೋ ಸಂಚಾರಕ್ಕೆ ಮಾರ್ಗ ಸಿದ್ಧವಾದರೂ ಸಹಿತ ಇನ್ನೂವರೆಗೆ ಉದ್ಘಾಟನೆಗೆ ಬಲ ಕೂಡಿ ಬರುತ್ತಿಲ್ಲ.
ಅಗತ್ಯದಷ್ಟು ಮೆಟ್ರೋ ರೈಲು ಪೂರೈಕೆ ಆಗಿಲ್ಲ
ಆರ್.ವಿ.ರಸ್ತೆ, ಜಯನಗರ, ಸಿಲ್ಕ್‌ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಹೀಗೆ ವಿವಿಧ ಬಡಾವಣೆಗಳ ಜನರಿಗೆ, ಐಟಿ ಉದ್ಯೋಗಿಗಳಿಗೆ ಈ ಮಾರ್ಗವು ಬಹಳ ಅಗತ್ಯವಾಗಿದೆ. ಆದರೆ ಅಗತ್ಯದಷ್ಟು ಡ್ರೈವರ್‌ಲೆಸ್ಟ್ ಮೆಟ್ರೋ ರೈಲುಗಳು ಪೂರೈಕೆ ಆಗದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಮೆಟ್ರೋ ಮಾರ್ಗ ನಿರ್ಮಾಣ, ಪ್ರಾಯೋಗಿಕ ಚಾಲನೆ, ಎಲ್ಲ ವಿಧದ ಪರಿಶೀಲನೆ ಮುಗಿದರೂ ಸಹಿತ ಜನರು ಇನ್ನೂ ಸಹ ಸಂಚಾರ ದಟ್ಟಣೆಯಲ್ಲಿ ವಾಹನಗಳ ಮೂಲಕ ಓಡಾಡುವ ಅನಿವಾರ್ಯತೆ ಎದುರಾಗಿದೆ.
08 ಸೆಟ್ ಮೆಟ್ರೋ ರೈಲು ಸಿಕ್ಕರೂ ಸಂಚಾರ ವಿಳಂಬ!
ಹಲವು ಗಡುವು ಮೀರಿದ ಬಳಿಕ ನಮ್ಮ ಮೆಟ್ರೋ ಡಿಸೆಂಬರ್ ಅಂತ್ಯಕ್ಕೆ ಬಳಿಕ, ಜನವರಿ ಅಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿತು. ಆದರೆ ಅಗತ್ಯವಾಗಿರುವ 08 ಸೆಟ್ ರೈಲುಗಳು ಬೆಂಗಳೂರಿಗೆ ಬಂದಿಲ್ಲ. ಈಗಿರುವ ಹಾಲಿ ಮೂರು ಸೆಟ್ ರೈಲುಗಳಿಂದ ಕಾರ್ಯಾಚರಣೆ ಅಸಾಧ್ಯವಾಗಿದೆ.
ಇಷ್ಟೊತ್ತಿಗಾಗಲೇ ಬೆಂಗಳೂರಿಗೆ ಅಗತ್ಯವಿದ್ದಷ್ಟು ರೈಲುಗಳು ಆಗಮಿಸಬೇಕಿತ್ತು. ಆದರೆ ಬಾರದ ಕಾರಣ ಜನವರಿ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲು ಓಡಾಡುವುದಿಲ್ಲ, ಬದಲಾಗಿ ಮತ್ತಷ್ಟು ವಿಳಂಬವಾಗುವ ನಿರೀಕ್ಷೆ ಆಗಿದೆ. ಒಂದು ವೇಳೆ ಇದೇ ತಿಂಗಳು ಅಗತ್ಯ ರೈಲುಗಳು ಬೆಂಗಳೂರಿಗೆ ಬಂದರೂ ಸಹಿತ ಅವುಗಳ ಹಳಿ ಜೋಡಣೆ ಕೆಲಸ, ಸಿಗ್ನಲ್ ತಪಾಸಣೆ, ಡ್ರೈವರ್‌ಲೆಸ್ ಆಗಿದ್ದರಿಂದ ಹಲವು ವಿಧದ ಪರೀಕ್ಷೆಗಳು ನಡೆಯಬೇಕು.
ಈ ಎಲ್ಲ ಪರೀಕ್ಷೆಗಳು ಜನವರಿ ಅಂತ್ಯದೊಳಗೆ ಆಗುವುದು ಕಷ್ಟ ಸಾಧ್ಯ. ಹೀಗಾಗಿ ನಿಗದಿತ ಗಡುವಿನೊಳಗೆ ಮೆಟ್ರೋ ಸಂಚಾರ ಆರಂಭವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೊಸ ವರ್ಷಕ್ಕೆ ಐಟಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಸಿಗಬೇಕಿದ್ದ ಸಿಹಿ ಸುದ್ದಿಗೆ ಬ್ರೇಕ್ ಬಿದ್ದಿದೆ. ಈ ಭಾಗದ ಪ್ರಯಾಣಿಕರಿಗೆ ನಿರಾಸೆಯಾಗಿದೆ.












Click it and Unblock the Notifications