Namma metro Yellow line: ಈ ಮಾರ್ಗ ಮತ್ತೆ 6 ತಿಂಗಳು ವಿಳಂಬ: ಪ್ರಯಾಣಿಕರಿಗೆ ನಿರಾಸೆ-ಯಾವಾಗ ಮುಕ್ತ, ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 17: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗಗಳು ವಿಸ್ತರಣೆ, ಹೊಸ ಮಾರ್ಗಗಳ ನಿರ್ಮಾಣ ಕಾರ್ಯ ಆಗುತ್ತಿವೆ. ಈ ವರ್ಷ ಫೆಬ್ರವರಿಗೆ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳ್ಳಬೇಕಿದ್ದ ಮೆಟ್ರೋ ಹಳದಿ ಮಾರ್ಗ (Namma metro yellow line) ಮತ್ತೆ ತಡವಾಗುವ ಮುನ್ಸೂಚನೆ ಸಿಕ್ಕಿದೆ.
ಹೌದು, ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಭಾಗಕ್ಕೆ ಮೆಟ್ರೋ ರೈಲಿನಲ್ಲಿ ಸಂಚರಿಸುವ ಆಸೆ ಇಟ್ಟುಕೊಂಡಿದ್ದ ಪ್ರಯಾಣಿಕರಿಗೆ ಮತ್ತೆ ನಿರಾಸೆಯಾಗುತ್ತಿದೆ. ಅಂದರೆ ಎಲ್ಲವು ಅಂದುಕೊಂಡಂತಾಗುತ್ತಿಲ್ಲ. ಆರ್‌ವಿ ರಸ್ತೆ- ಬೊಮ್ಮಸಂದ್ರ ವರೆಗಿನ ಮೆಟ್ರೋ ಹಳದಿ ರೇಖೆಯ ಸುಮಾರು 06 ತಿಂಗಳು ತಡವಾಗಿ ಸಾರ್ವಜನಿಕರಿಗೆ ಮುಕ್ತವಾಗಬಹುದು ಎಂದು ಹೇಳಲಾಗುತ್ತಿದೆ.

ಮಾರ್ಗದ ನಿರ್ಮಾಣ ಕೆಲಸ ಪೂರ್ಣ
ಹಳದಿ ಮಾರ್ಗದ ಕಾಮಗಾರಿ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಪ್ರಾಯೋಗಿಕ ಚಾಲನೆ ಮಾಡಿ ಈ ಮಾರ್ಗವನ್ನು ಉದ್ಘಾಟನೆ ಮಾಡುವುದೊಂದೆ ಬಾಕಿ ಇತ್ತು. ಈ ವರ್ಷ ಹೊಸ ಮಾರ್ಗ ತೆರೆಯುವ ಪಟ್ಟಿಯಲ್ಲಿ ಈ ಹಳದಿ ಮಾರ್ಗದ ಹೆಸರು ಕೇಳಿ ಬಂದಿತ್ತು. ಹೊಸವರ್ಷದ ಆರಂಭಿಕ ತಿಂಗಳಲ್ಲಿ ತೆರೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದರು. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಒತ್ತಾಯಿಸಿದ್ದರು.
ಬೋಗಿಗಳ ಪೂರೈಕೆಯಲ್ಲಿ ವಿಳಂಬ
ಸದ್ಯ ಈ ನೂತನ ಮೆಟ್ರೋ ಮಾರ್ಗ ಫೆಬ್ರುವರಿಗೆ ಒಫನ್ ಆಗದೇ ಜುಲೈ ತಿಂಗಳಿಗೆ ಮುಂದೂಡಲಾಗಿದೆ. ಕಾರಣ ನಿರೀಕ್ಷಿಸಲಾಗಿದ್ದು, ಚೀನಾ ಮೆಟ್ರೋ ಬೋಗಿಗಳ ಪೂರೈಕೆಯಲ್ಲಿ ಮತ್ತೆ ವಿಳಂಬ ವಾಗಿದೆ ಎಂದು ಹೇಳಲಾಗುತ್ತಿದೆ. ಮೆಟ್ರೋ ರೈಲು ಕೋಚ್‌ಗಳು ಪೂರೈಕೆ ಆದ ಬಳಿಕ ಸಿಗ್ನಲ್ ತಪಾಸಣೆ, ಪ್ರಾಯೋಗಿಕ ಕಾರ್ಯ ನಡೆಸಿ ಮಾರ್ಗ ಲೋಕಾರ್ಪಣೆ ಮಾಡಲಾಗುವುದು ಎಂದು BMRCL ಮೂಲಗಳು ತಿಳಿಸಿವೆ.
ಹಳದಿ ಮಾರ್ಗಕ್ಕೆ 216 ಮೆಟ್ರೋ ಕೋಚ್ ಪೂರೈಕೆ
ಈ ಬಗ್ಗೆ ಮಾತನಾಡಿರುವ ಬಿಎಂಆರ್‌ಸಿಎಲ್ ಅಧಿಕಾರಿ ಯಶವಂತ್ ಚೌವಾಣ್, ಮಾರ್ಗದಲ್ಲಿನ ಕೆಲಸ ಮುಗಿದಿದೆ. ಚೀನಾ ಕಂಪನಿಯಿಂದ ಒಪ್ಪಂದದಂತೆ ಎರಡು ಮಾದರಿ ರೈಲುಗಳೊಂದಿಗೆ ಬರಬೇಕು. ಆದರೆ ಬೋಗಿ ಪೂರೈಕೆಗೆ ಚೀನಾಗೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿಗೆ ಕೋಚ್‌ಗಳು ಬರುವುದು ತಡವಾಗಿವೆ.

ಕೋಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಕಂಪನಿ ಮೂಲಕ ಸರಬರಾಜು ಆಗುವ ಒಟ್ಟು 216 ಮೆಟ್ರೋ ಕೋಚ್‌ಗಳನ್ನು ಹಳದಿ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಿವೆ. ಈ ತಿಂಗಳ ಕೊನೆ ವಾರದಲ್ಲಿ ಚೀನಾ ಸಿಬ್ಬಂದಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಾಕಿ ಕೆಲಸಗಳು ಮುಗಿದು, ಅನುಮತಿ ಸಿಗಬೇಕಿದೆ
ನಮ್ಮ ಮೆಟ್ರೋ ವಿಶೇಷ ಮಾದರಿಯ ಕೋಚ್ ಗಳನ್ನು ಪೂರೈಕೆ ಮಾಡುವ ಚೀನಾ ಕಂಪನಿ ಸಿಬ್ಬಂದಿಗೆ ವೀಸಾ ಏನೋ ಸಿಕ್ಕಿದೆ. ಆದರೆ ಸಿಬ್ಬಂದಿ ಭೇಟಿ ನಿಗದಿ ಆಗಿಲ್ಲ. ಅಲ್ಲದೇ ಚೀನಾದ ಮೆಟ್ರೋ ಬೋಗಿಗಳು ಚೆನ್ನೈ ಬಂದರಿಗೆ ತಲುಪಬೇಕು, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬರಬೇಕಿದೆ.
ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಟಿಟಾಘರ್ ಘಟಕದಲ್ಲಿ ತಯಾರಿಸಿದ ಈ ಕೋಚ್‌ಗಳು ಬಂದ ಬಳಿಕವೇ ಒಂದಷ್ಟು ಪರಿಶೀಲನೆ ನಡೆಯಲಿವೆ. ನಂತರ ಪ್ರಾಯೋಗಿಕ ಪರಿಶೀಲನೆ ಸಹ ನಡೆಯಬೇಕಿದ್ದು, ಅದಕ್ಕೆ ಅನುಮತಿ ಸಹ ದೊರೆಯಬೇಕಿದೆ. ಇದಕ್ಕೆಲ್ಲ ಕೆಲವು ತಿಂಗಳ ಸಮಯ ಹಿಡಿಯಲಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ಮುಖ್ಯವಾಗಿ ನಮ್ಮ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಅನುಮೋದನೆ ನೀಡಿದ ಬಳಿಕವ ಅಧಿಕೃತವಾಗಿ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ದಿನಾಂಕ ನಿಗದಿ ಆಗಲಿದೆ. ಇದೆಲ್ಲ ಕಾರಣಗಳಿಂದ ಜುಲೈ ಹೊತ್ತಿಗೆ ಈ ಮಾರ್ಗವು ಮುಕ್ತಗೊಳ್ಳುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.
ಹೀಗಾಗಿ ಮುಂದಿನ ಜುಲೈ ತಿಂಗಳಲ್ಲಿ ಈ ವರ್ಷದ ಬಹುನಿರೀಕ್ಷೆಯ ಮೆಟ್ರೋ ಹಳದಿ ಮಾರ್ಗವು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications